“ಬಡ ಆಟೋ ಡ್ರೈವರ್ ಮಕ್ಕಳು ಆಟೋ ಡ್ರೈವರ್ ಕೆಲಸಾನೆ ಮಾಡೋದು”: ಶಿವಮೊಗ್ಗ ಸರ್ಕಾರಿ ಉರ್ದು ಶಾಲೆ ಶಿಕ್ಷಕಿಯಿಂದ ಮಕ್ಕಳ ಮೇಲೆ ದೌರ್ಜನ್ಯ
ಶಿವಮೊಗ್ಗದ ಸರ್ಕಾರಿ ಉರ್ದು ಶಾಲಾ ಶಿಕ್ಷಕಿ ರಾಫಿಯಾ ಗಜಾಲಿ ಬಡ ವಿದ್ಯಾರ್ಥಿಗಳಿಗೆ ದೌರ್ಜನ್ಯ ಎಸಗಿ, ಅವರ ಕುಟುಂಬದ ವೃತ್ತಿಯನ್ನು ಹೀಯಾಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೋಷಕರು ಬಿಇಓ ಕಚೇರಿಗೆ ದೂರು ನೀಡಿ, ಶಿಕ್ಷಕಿಯನ್ನು ತಕ್ಷಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಶಿಕ್ಷಣ ಇಲಾಖೆಯ ತಕ್ಷಣದ ಮಧ್ಯಪ್ರವೇಶಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿವಮೊಗ್ಗ, ನ.15: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಭವಿಷ್ಯ ರೂಪಿಸಬೇಕಾದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು, ಬಡ ಮಕ್ಕಳ ಕುಟುಂಬದ ವೃತ್ತಿಯನ್ನು ಹೀಯಾಳಿಸಿ ಅಸಭ್ಯ ಮಾತುಗಳನ್ನಾಡುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಶಿವಮೊಗ್ಗದಲ್ಲಿ ಕೇಳಿಬಂದಿದೆ. ನಗರದ ಟಿಪ್ಪು ನಗರದ 6ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ರಾಫಿಯಾ ಗಜಾಲಿ ವಿರುದ್ಧ ಮಕ್ಕಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಸರ್ಕಾರಿ ಉರ್ದು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬದ ಮಕ್ಕಳಿಗೆ ಪಾಠ ಮಾಡುವ ಬದಲು ಶಿಕ್ಷಕಿ ರಾಫಿಯಾ ಗಜಾಲಿ ಅವರು ಪಠ್ಯೇತರ ಅಸಭ್ಯ ವಿಚಾರಗಳನ್ನು ಬೋಧಿಸುತ್ತಾ ಮಕ್ಕಳ ಮನಸ್ಸು ಕೆಡಿಸುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ. ತರಗತಿಯಲ್ಲಿ ಮಕ್ಕಳನ್ನು ಉದ್ದೇಶಿಸಿ, “ಬಡ ಆಟೋ ಡ್ರೈವರ್ ಮಕ್ಕಳು ಮುಂದೆ ಆಟೋ ಡ್ರೈವರ್ ಕೆಲಸಾನೇ ಮಾಡೋದು, ಗುಜರಿ ಮಾರುವವರ ಮಕ್ಕಳು ಗುಜರಿ ಕೆಲಸನೇ ಮಾಡೋದು ಹಾಗೂ ಹೆಣ್ಣು ಮಕ್ಕಳು ಟೈಲ್ಸ್ ಕೆಲಸದವರ ಜೊತೆ ಮದುವೆಯಾಗೋದು” ಎಂದು ಶಿಕ್ಷಕಿ ಲೇವಡಿ ಮಾಡಿ ನಿಂದಿಸಿದ್ದಾರೆ ಎನ್ನಲಾಗಿದೆ.
ಶಿಕ್ಷಕಿಯ ಈ ಕಿರುಕುಳ ಮತ್ತು ದಬ್ಬಾಳಿಕೆಯ ವರ್ತನೆಯಿಂದ ಶಾಲಾ ಮಕ್ಕಳು ತೀವ್ರ ಬೇಸರಗೊಂಡಿದ್ದು, ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಳಿದ ಪೋಷಕರು ಶಿವಮೊಗ್ಗ ಬಿಇಓ ಕಚೇರಿಗೆ ದೂರು ನೀಡಿದ್ದು, ಶಿಕ್ಷಕಿ ರಾಫಿಯಾ ಗಜಾಲಿ ಅವರನ್ನು ತಕ್ಷಣವೇ ಶಾಲೆಯಿಂದ ವರ್ಗಾವಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: “ಬೆಂಗಳೂರಿನ ರಸ್ತೆಗಳಿಗೆ ಡಾಂಬರ್ ಆಗಬೇಕಾದ್ರೆ ಮೋದಿಯವರೇ ಬರಬೇಕಾಯಿತು”: ಜಿಬಿಎ, ಬಿಎಂಆರ್‌ಸಿಎಲ್ ವಿರುದ್ಧ ಜನರ ಆಕ್ರೋಶ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಅಥವಾ ಕಿರುಕುಳ ನೀಡಿರುವುದು ಇದೇ ಮೊದಲೇನಲ್ಲ. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಇಂತಹ ಹಲವು ಪ್ರಕರಣಗಳು ವರದಿಯಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿಂದೆ ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಜಾತಿ, ಬಡತನ ಅಥವಾ ಕಲಿಕಾ ಸಾಮರ್ಥ್ಯವನ್ನು ಮುಂದಿಟ್ಟುಕೊಂಡು ಶಿಕ್ಷಕರು ನಿಂದಿಸಿದ ಹಾಗೂ ಅಮಾನವೀಯವಾಗಿ ಥಳಿಸಿದ ಘಟನೆಗಳು ಬೆಳಕಿಗೆ ಬಂದಿದ್ದವು. ಅಂತಹ ಪ್ರಕರಣಗಳಲ್ಲಿ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಶಿಕ್ಷಕರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿತ್ತು. ಬಡ ಮತ್ತು ಮಧ್ಯಮ ವರ್ಗದ ಮಕ್ಕಳೇ ಹೆಚ್ಚಾಗಿ ಆಶ್ರಯಿಸಿರುವ ಸರ್ಕಾರಿ ಶಾಲೆಗಳಲ್ಲಿ ಇಂತಹ ದಬ್ಬಾಳಿಕೆಯ ಪ್ರವೃತ್ತಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಿವಮೊಗ್ಗದ ಟಿಪ್ಪು ನಗರ ಉರ್ದು ಶಾಲೆಯ ಪ್ರಕರಣದಲ್ಲೂ ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




