
ಶಿವಮೊಗ್ಗ, ಆಗಸ್ಟ್ 02: ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಸೂಚನೆ ಬೆನ್ನಲ್ಲೇ ಸರ್ಕಾರಿ ಶಾಲೆಯ (Shivamogga Government School) ನೀರಿನ ಟ್ಯಾಂಕ್‌ಗೆ ಕೀಟನಾಶಕ (Poison) ಬೆರೆಸಿದ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ತೀರ್ಥಹಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ 18 ಪೊಲೀಸ್ ಸಿಬ್ಬಂದಿ ಒಳಗೊಂಡಿರುವ ಮೂರು ತಂಡಗಳನ್ನು ರಚಿಸಿದ್ದಾರೆ.
ಟವರ್ ಡಂಪ್, ಸಿಸಿಟಿವಿ ಪರಿಶೀಲನೆಗೆ ಐದು ಮಂದಿ ಸಿಬ್ಬಂದಿ, ಗ್ರಾಮದ ಸುತ್ತಮುತ್ತ ಮಾಹಿತಿ ಸಂಗ್ರಹಣೆಗೆ 8 ಮಂದಿ ಪೊಲೀಸರು, ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆಗಾಗಿ ಐವರು ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ಶಿವಮೊಗ್ಗ ಪೊಲೀಸರು ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅಧಿಕಾರಿಗಳು ಈಗಾಗಲೇ ಶಾಲೆಗೆ ಭೇಟಿ ನೀಡಿದ್ದಾರೆ. ನೀರಿನ ಟ್ಯಾಂಕ್ನಲ್ಲಿ ಕಳೆ ನಾಶಕ ಹಾಕಿರುವ ಶಂಕೆ ಇದೆ. ಘಟನೆ ನಡೆದ ದಿನದಂದು ಶಾಲೆಯಲ್ಲಿ 18 ಜನ ಮಕ್ಕಳಿದ್ದರು. ಅವರ ಆರೋಗ್ಯ ತಪಾಸಣೆ ಆಗಿದೆ. ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಘಟನೆ ನಡೆದ ಮರುದಿನ ಶಾಲೆಗೆ ರಜೆ ನೀಡಲಾಗಿತ್ತು ಎಂದು ತಿಳಿಸಿದರು.
ಘಟನೆ ಸಂಬಂಧಿಸಿದಂತೆ ಈಗಾಗಲೇ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಪೋಲಿಸರು ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಕೃತ್ಯ ಅತ್ಯಂತ ಖಂಡನೀಯ. ಅತ್ಯಂತ ಹೀನ ಕೃತ್ಯ ಇದಾಗಿದೆ. ಅವರ ಮನಸ್ಸಿನಲ್ಲಿ ಯಾವುದೇ ದ್ವೇಷ ವಿಚಾರವಿರಲಿ ಅದನ್ನು ಮಕ್ಕಳ ಮೇಲೆ ತೀರಿಸಿಕೊಳ್ಳುವುದು ಕೀಳು ಕೆಲಸವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಲಾಗಿದೆ. ಯಾರು ಮಾಡಿದ್ದಾರೆ ಎಂಬುವುದನ್ನು ಮೊದಲು ಪತ್ತೆ ಮಾಡಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತರಗತಿಗಳು ಎಂದಿನಂತೆಯೇ ಆರಂಭಗೊಂಡ ಬಳಿಕ ಮಕ್ಕಳಿಗೆ ಹಾಲು ನೀಡಲು ಬಿಸಿಯೂಟ ತಯಾರಿಕಾ ಸಿಬ್ಬಂದಿ, ಹೆಡ್ ಟ್ಯಾಂಕ್‌ನ ನೀರಿನಲ್ಲಿ ಕೈ ತೊಳೆದುಕೊಳ್ಳಲು ಹೋದಾಗ ನೀರಿನ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ನೀರಿನ ವಾಸನೆ ಗಮನಿಸಿದಾಗ ಕೀಟನಾಶಕ ಬೆರೆತಿರುವ ಅನುಮಾನ ವ್ಯಕ್ತವಾಗಿತ್ತು. ಸಿಬ್ಬಂದಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ವಿಷಯ ತಿಳಿಸಿದರು. ಕೂಡಲೇ ಶಾಲಾಡಳಿತ ಎಚ್ಚೆತ್ತುಕೊಂಡು, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಬಳಿಕ ಟ್ಯಾಂಕ್‌ನ ನೀರನ್ನು ಪರೀಕ್ಷೆ ಮಾಡಿದಾಗ ಕೀಟನಾಶಕ ಬೆರೆಸಿರುವುದು ದೃಢಪಟ್ಟಿತ್ತು.
ಇದನ್ನೂ ಓದಿ: ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ
ಶಾಲೆಯ ಪಕ್ಕದಲ್ಲಿರುವ ಹಣ್ಣಿನ ಮರವನ್ನು ಹತ್ತಿದ ಕಿಡಿಗೇಡಿಗಳು ಅಲ್ಲಿಂದ ಶಾಲೆಯ ಚಾವಣಿಗೆ ಬಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ತಂದಿದ್ದ ಕೀಟನಾಶಕವನ್ನು ನೀರಿನ ಟ್ಯಾಂಕ್‌ಗೆ ಸುರಿದಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ವಿಷ ಮಿಶ್ರಣ ಮಾಡಲು ಬಳಸಿದ್ದ ಖಾಲಿ ಬಾಟಲಿಯೊಂದು ಸ್ಥಳದಲ್ಲಿ ಪತ್ತೆಯಾಗಿತ್ತು.
Published On - 7:49 pm, Sat, 2 August 25