ಶಿವಮೊಗ್ಗ: ಸಿಗಂದೂರು (Sigandur) ಪ್ರವಾಸಿಗರು ಕೆಲ ದಿನಗಳ ಕಾಲ ಪ್ರವಾಸ ಮುಂದೂಡುವುದು ಸೂಕ್ತ. ಏಕೆಂದರೆ ಮುಂಗಾರು ಮಳೆ (Monsoon Rains) ಆರಂಭ ವಿಳಂಬ ಹಿನ್ನಲೆ ಸಾಗರ (Sagar) ತಾಲೂಕಿನ ಶರಾವತಿ (Sharavati) ಹಿನ್ನೀರಿನ ಪ್ರದೇಶ ಬರಿದಾದ ಕಾರಣ ಇಂದಿನಿಂದ (ಜೂ.14) ಹೊಳೆಬಾಗಿಲು-ಸಿಗಂದೂರು ಲಾಂಚ್ನಲ್ಲಿ (Launch) ವಾಹನಗಳಿಗೆ ನಿರ್ಬಂಧಿಸಲಾಗಿದೆ. ಕೇವಲ ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶವಿದೆ. ರಸ್ತೆ ಮಾರ್ಗದ ಮೂಲಕ ವಾಹನದಲ್ಲಿ ಸಿಂಗದೂರಿಗೆ ತೆರಳಲು ಅವಕಾಶವಿದೆ.
ವಾಹನದಲ್ಲಿ ಬರುವ ಪ್ರವಾಸಿಗರು ಹೊಸನಗರ, ನಗರ, ನಿಟ್ಟೂರು, ತುಮರಿ ರಸ್ತೆ ಮೂಲಕ ಬರಬಹುದು. ಲಾಂಚ್ ಮೂಲಕ ಬರುವವರು ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ವಾಹನಗಳನ್ನು ಹತ್ತಿಸಿದರೆ ದಡದ ಕೆಸರಿನಲ್ಲಿ ಲಾಂಚ್ ಸಿಕ್ಕಿ ಬೀಳ್ಳುವ ಸಾಧ್ಯತೆ ಇದೆ. ಹಾಗಾಗಿ ಜನರನ್ನು ಮಾತ್ರ ಲಾಂಚ್ಗೆ ಹತ್ತಿಸಲು ನಿರ್ಧರಿಸಲಾಗಿದೆ.
ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆ ಆದ ಕಾರಣ ಲಾಂಚ್ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಗಾರು ಆರಂಭವಾಗದಿದ್ದರೆ ಲಾಂಚ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಸಾಧ್ಯತೆಗಳು ಇದೆ. ಸ್ಥಳೀಯರ ಸಂಚಾರ ದೃಷ್ಟಿಯಿಂದ ಸಣ್ಣ ಲಾಂಚ್ ಮತ್ತು ಬೋಟ್ ವ್ಯವಸ್ಥೆ ಮಾಡಲಾಗಿದೆ. ಕರೂರು, ಬಾರಂಗಿ ಹೋಬಳಿಯ ಜನಸಾಮಾನ್ಯರಿಗೆ ಸಾಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, 50 ಕಿಲೋಮೀಟರ್ ಬದಲು 150 ಕಿಲೋಮೀಟರ್ ಕ್ರಮಿಸಿ ಸಾಗರ ಹೋಗುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಬಾಲಕಿ ಸಾವು, ಲೈಂಗಿಕ ದೌರ್ಜನ್ಯ; ಖಾಸಗಿ ವಸತಿ ಶಾಲೆಯ ಮಾಲೀಕನ ವಿರುದ್ಧ 2 ಎಫ್‌ಐಆರ್ ದಾಖಲು
ರಾಜ್ಯದಲ್ಲಿ ಈಗಾಗಲೇ ಮುಂಗಾರು ಪ್ರವೇಶ ಆಗಿದ್ದರೂ ಮಲೆನಾಡು ಜಿಲ್ಲೆಗಳಲ್ಲಿ ಮಾತ್ರ ಮಳೆ ಹೇಳಿಕೊಳ್ಳುವ ರೀತಿ ಬಂದಿಲ್ಲ. ಇದರ ಪರಿಣಾಮವಾಗಿ ಅನೇಕ ಡ್ಯಾಂಗಳ ನೀರಿನ ಮಟ್ಟ ಕಡಿಮೆ ಆಗಿದ್ದು, ಅದರ ಪರಿಣಾಮ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಮಳೆ ಕಡಿಮೆ ಆದ ಕಾರಣ ಲಿಂಗನಮಕ್ಕಿ ಜಲಾಶಯದ ಒಡಲು ಬರಿದಾಗಿದೆ. ಇದು ಒಂದೆಡೆ ಕೃಷಿಯ ಮೇಲೆ ಪರಿಣಾಮ ಬೀರಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 14 June 23