
ಶಿವಮೊಗ್ಗ, ಡಿ.18: ಮಕ್ಕಳಿಲ್ಲ ಎಂದು ಕೂರಗುತ್ತಿರುವ ಅದೆಷ್ಟೋ ದಂಪತಿಗಳು ಇಂದಿಗೂ ಮಕ್ಕಳಿಗಾಗಿ ಹಂಬಲಿಸುತ್ತಿದ್ದಾರೆ. ಇನ್ನು ಕೆಲವೊಂದು ಜನ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಅನಾಥರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳು ಬೇಡ ಎಂದ ಮೇಲೆ ಯಾಕೆ ಮಗು ಮಾಡಿಕೊಳ್ಳಬೇಕು. ಮಕ್ಕಳನ್ನು ಹೆತ್ತು ಹೀಗೆ ಬೀದಿಯಲ್ಲಿ ಎಸೆಯುವ ಪ್ರವೃತ್ತಿ ಕರ್ನಾಟಕದ ಹಲವೆಡೆ ನಡೆಯುತ್ತಿದೆ. ರಾಜ್ಯದಲ್ಲಿ ಇತ್ತೀಚಿಗೆ ಅನಾಥ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ನವಜಾತ ಶಿಶುಗಳನ್ನು ಬೀದಿಯಲ್ಲಿ ಎಸೆದು ಹೋಗಿರುವ ಸುಮಾರು ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ.
ಮಲ್ಲಾಪುರ ಗ್ರಾಮದಲ್ಲಿ 3 ದಿನದ ಹಸುಗೂಸನ್ನು ರಸ್ತೆ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ. ಕುಶ ದೊಡ್ಡಪ್ಪ ಎಂಬುವವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ತಮ್ಮ ಮಗ ತಿಪ್ಪೇಶ್ಗೆ ಚಿಕಿತ್ಸೆ ಕೊಡಿಸಿ ಊರಿಗೆ ತೆರಳ್ತಿದ್ದ ವೇಳೆ, ಮಲ್ಲಾಪುರ ಬಳಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದಾರೆ. ಸೋಮವಾರ ರಾತ್ರಿ ಗಂಟೆ 10.45ಕ್ಕೆ ಈ ಘಟನೆ ನಡೆದಿದೆ. ಈ ವೇಳೆ ರಸ್ತೆ ಪಕ್ಕದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿದೆ. ತಕ್ಷಣ ಕುಶ ಅವರು ತಮ್ಮ ಅತ್ತಿಗೆಯ ಜತೆಗೆ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಅವರಿಗೊಂದು ಶಾಕ್ ಕಾದಿತ್ತು. ಕಲ್ಲು, ಮುಳ್ಳಿನ ರಾಶಿಯಲ್ಲಿ ಗಂಡು ಶಿಶುವೊಂದು ಪತ್ತೆಯಾಗಿದೆ.
ಇದನ್ನೂ ಓದಿ: ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?
ಇನ್ನು ಈ ಶಿಶುವನ್ನು ಒಬ್ಬಂಟಿಯಾಗಿ ಯಾರೋ ಬಿಟ್ಟು ಹೋಗಿದ್ದಾರೆ ಎಂದು ಅಲ್ಲಿಯೇ ಮನೆಯವರನ್ನು ಹುಡುಕಾಡಿದ್ದಾರೆ. ಮಗುವಿನ ಬಗ್ಗೆ ಸುತ್ತಮುತ್ತಲಿನ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಯಾರು ಕೂಡ ಮಗುವಿನ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗುವಿನ ಕುಟುಂಬಕ್ಕಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸರು ಕೂಡ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ