ಶಿವಮೊಗ್ಗ: ನಗರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಂದ ಬಾಂಬ್ ತಯಾರಿಗೆ ಬೇಕಿರುವ ಕಚ್ಚಾ ಸಾಮಗ್ರಿಗಳೂ ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶಂಕಿತ ಉಗ್ರರ ಬಂಧನ ಕುರಿತು ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು, ಪ್ರೇಮ್ಸಿಂಗ್ ಹತ್ಯೆ ಪ್ರಕರಣದಲ್ಲಿ ಜಬೀ ಬಂಧನವಾಗಿತ್ತು. ಜಬೀ ವಿಚಾರಣೆ ಮಾಡಿದಾಗ ಶಾರಿಕ್ ವಿಚಾರ ಬೆಳಕಿಗೆ ಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈವರೆಗೆ 11 ಸ್ಥಳಗಳಲ್ಲಿ ದಾಳಿ ಮಾಡಿ ಹಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರಿಂದ 14 ಮೊಬೈಲ್ ಮತ್ತು 1 ಡಾಂಗಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತರಿಂದ ಎರಡು ಲ್ಯಾಪ್‌ಟಾಪ್, ಒಂದು ಪೆನ್‌ಡ್ರೈವ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸ್ಫೋಟದ ಸ್ಥಳದಲ್ಲಿ ಬಾಂಬ್‌ನ ಅವಶೇಷಗಳು ಪತ್ತೆಯಾಗಿವೆ. ಆಗಸ್ಟ್ ತಿಂಗಳಲ್ಲಿ ರಾಷ್ಟ್ರಧ್ವಜ ಸುಟ್ಟಿರುವ ಮಾಹಿತಿಯೂ ಲಭ್ಯವಾಗಿದೆ. ಬಂಧಿತರಿಂದ ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಬಂಧಿತರ ಮೂವರೂ ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ನಮಗೆ ಬ್ರಿಟೀಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ನೈಜ ಸ್ವಾತಂತ್ರ್ಯ ಇಲ್ಲ. ಇಸ್ಲಾಮಿಕ್ ಸ್ಟೇಟ್ ನಿರ್ಮಾಣ, ಷರಿಯಾ ಕಾನೂನುಗಳಿಂದ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂಧಿದ್ದರು. ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ ಆರೋಪಿಗಳು ನೈಜ ಬಾಂಬ್ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕ್ರಿಪ್ಟೊ ಕರೆನ್ಸಿ ಮೂಲಕ ವಹಿವಾಟು ನಡೆಸಿದ್ದ ಮಾಹಿತಿಯೂ ಲಭ್ಯವಾಗಿದೆ ಎಂದು ಎಸ್ಪಿ ತಿಳಿಸಿದರು.
ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮುಖ್ಯಾಂಶಗಳು
Published On - 12:44 pm, Fri, 23 September 22