ಶಿವಮೊಗ್ಗ: VISL ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ; ಭದ್ರಾವತಿ ಬಂದ್​ಗೆ ಕರೆ

| Updated By: ವಿವೇಕ ಬಿರಾದಾರ

Updated on: Feb 24, 2023 | 10:52 AM

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL)​ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಭದ್ರಾವತಿಯಲ್ಲಿ ಇಂದು (ಫೆ.24) ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಶಿವಮೊಗ್ಗ: VISL ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ; ಭದ್ರಾವತಿ ಬಂದ್​ಗೆ ಕರೆ
ಭದ್ರಾವತಿ ಬಂದ್​ (ಟಯರ್​ಗೆ ಬೆಂಕಿ)
Follow us on

ಶಿವಮೊಗ್ಗ: ರಾಜ್ಯದ ಪ್ರತಿಷ್ಠೆಯಾಗಿರುವ, ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿನ (Bhadravati) ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL)​ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಭದ್ರಾವತಿಯಲ್ಲಿ ಇಂದು (ಫೆ.24) ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬೆಳ್ಳಂ ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ರಸ್ತೆಗೆ ಇಳಿದಿದ್ದು, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬಂದ್​ಗೆ ಕರೆ ನೀಡಿವೆ. ಯಾವುದೇ ಕಾರಣಕ್ಕೂ ವಿಐಎಸ್ಎಲ್ ​ಮುಚ್ಚಬಾರದು. ವಿಐಎಸ್​ಎಲ್​ ಪುನಶ್ಚೇತನ ಮಾಡಬೇಕು ಎಂದು ಸಂಘಟನೆಗಳು ತಹಶೀಲ್ದಾರ್​ಗೆ ಮನವಿ ಮಾಡಿವೆ.

ಭದ್ರಾವತಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಇರಲಿದೆ. ವಿಐಎಸ್ಎಲ್ ಕಾರ್ಮಿಕರು, ವಿವಿಧ ಸಂಘಟನೆಗಳ ಪ್ರಮುಖರು ಬೈಕ್​ಗಳಲ್ಲಿ ವಿವಿಧ ಬಡಾವಣೆಗೆ ತೆರಳಿ ಬಂದ್​ಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಪ್ರಾರಂಭವಾಗಿದ್ದು. ಈ ವೇಳೆ ಕಾರ್ಮಿಕರು ನಡು ರಸ್ತೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಈ ಬಂದ್​ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ವರ್ತಕರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಸಮುದಾಯದ ಮುಖಂಡರು ಸೇರಿ 26ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ಸದನದಲ್ಲಿ ಪ್ರತಿಧ್ವನಿಸಿದ ವಿಐಎಸ್ಎಲ್

ಶಾಸಕ ಸಂಗಮೇಶ, ವಿಎಸ್​ಐಎಲ್ ಕಾರ್ಖಾನೆಯನ್ನು ಬಂದ್ ಆಗುತ್ತಿರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ಈ ಕಂಪನಿ ಉಳಿಸಲು ಒಂದು ಸರ್ವಾನುಮತದಿಂದ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದ್ದರು. ಇವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ವಿಐಎಸ್‌ಎಲ್‌ ಉಳಿಸುವಂತೆ ಆಗ್ರಹ ವ್ಯಕ್ತಪಡಿಸಿದರು. ಕೂಡಲೇ ಕಂಪನಿ ಉಳಿಸಲು ನಿರ್ಣಯ ಮಾಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭದ್ರಾವತಿಯ ವಿಐಎಸ್‌ಎಲ್‌ ಕೈಗಾರಿಕೆ ಮುಚ್ಚಲು ಅವಕಾಶ ಕೊಡಲ್ಲ. ಮೊದಲು ಕಾರ್ಖಾನೆ ಮುಚ್ಚಲು ಬಂದಿರುವ ಆದೇಶಕ್ಕೆ ತಡೆಯಾಜ್ಞೆ ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಂಸದ ರಾಘವೇಂದ್ರ ಅವರ ನೇತೃತ್ವದಲ್ಲಿ ಈಗಾಗಲೇ ಮನವಿ ನೀಡಲಾಗಿದೆ ಎಂದು ಹೇಳಿದ್ದರು.

ರಾಜ್ಯದ ಹೆಮ್ಮೆಯಾಗಿರುವ ಹಾಗೂ ಸ್ವಾತಂತ್ರ್ಯದ ನಂತರ ದೇಶದಲ್ಲಿ ಸೃಷ್ಟಿಯಾಗಿದ್ದ ಕೈಗಾರಿಕಾ ಕ್ರಾಂತಿಯ ವೇಳೆ ಭದ್ರಾವತಿಯಲ್ಲಿ ಆರಂಭಿಸಲಾಗಿರುವ ವಿಐಎಸ್‌ಎಲ್‌ನ್ನು ಮುಚ್ಚಲು ಬಿಡುವುದಿಲ್ಲ ಎಂದು ವಿಧಾನಸಭಾ ಅಧಿವೇಶನದಲ್ಲಿ ಸರ್ವಪಕ್ಷಗಳ ನಾಯಕರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ