ಶಿವಮೊಗ್ಗ: ಜಲ್ಲಿ ತುಂಬಿದ್ದ ಟಿಪ್ಪರ್ ಡಿಕ್ಕಿಯಾಗಿ ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಸಣ್ಣಮನೆ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಅಂಕಿತಾ, ಐಶ್ವರ್ಯ ಎಂಬ ಮತ್ತಿಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಯಲವಟ್ಟಿ ಗ್ರಾಮದ ಪ್ರತಿಮಾ(18) ಮೃತ ವಿದ್ಯಾರ್ಥಿನಿ.
ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ನಿಂದ ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿ ಪ್ರತಿಮಾ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇನಿಬ್ಬರು ಗಾಯಾಳುಗಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಾಲಕನ ಅಜಾಗರೂಕತೆ, ಅತಿವೇಗವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೈಲಿಗೆ ದೇಹವೊಡ್ಡಿ ಯುವಕ ಆತ್ಮಹತ್ಯೆಇ
ಬಾಗಲಕೋಟೆಯ ಶಿರೂರು ಗೇಟ್ ಬಳಿ ರೈಲ್ವೆ ಹಳಿಯಲ್ಲಿ ತುಂಡಾದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಪರಶುರಾಮ ನಿಂಬಾಳ್ಕರ್(27) ಮೃತ ಯುವಕ. ವಿಜಯಪುರ ಜಿಲ್ಲೆ ಜೈನಾಪುರ ಗ್ರಾಮದ ನಿವಾಸಿ ಪರಶುರಾಮ ನಿಂಬಾಳ್ಕರ್ ರೈಲಿಗೆ ದೇಹವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಗಲಕೋಟೆ ರೇಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:40 pm, Wed, 28 December 22