ತ್ಯಾವರೆಕೊಪ್ಪನಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಗಂಡು ಸಿಂಹದೊಂದಿಗೆ ಹೋರಾಡಿದ್ದ ಸಿಂಹಣಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2022 | 4:19 PM

ಗತಿಸಿರುವ ಮಾನ್ಯ ಮತ್ತು ಇದೇ ಧಾಮದ 7 ವರ್ಷ ವಯಸ್ಸಿನ ಗಂಡು ಸಿಂಹ ಯಶವಂತ ನಡುವೆ ಅದ್ಯಾಕೆ ಜಗಳ ಹುಟ್ಟಿಕೊಂಡಿತೋ ಗೊತ್ತಿಲ್ಲ. ಬಹಳ ಜಿದ್ದು ಮತ್ತು ನಾವು ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಸಿಟ್ಟಿನಲ್ಲಿ ಮಾನ್ಯ ಮತ್ತು ಯಶವಂತ್​ ಕಾದಾಡಿದವು. ಪ್ರಾಯಶ: ಯಶವಂತನ ಕೈ ಮೇಲಾಗುತ್ತಿರುವುನ್ನು ಅರಿತು ಮಾನ್ಯ ಸೋಲೊಪ್ಪಿಕೊಂಡಿದ್ದರೆ ಅದರ ಪ್ರಾಣ ಉಳಿಯುತ್ತಿತ್ತೇನೋ?

ತ್ಯಾವರೆಕೊಪ್ಪನಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಗಂಡು ಸಿಂಹದೊಂದಿಗೆ ಹೋರಾಡಿದ್ದ ಸಿಂಹಣಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು!
ಮೃತಪಟ್ಟ ಸಿಂಹಿಣಿ ಮಾನ್ಯ
Follow us on

ಕಳೆದ ವಾರ ಶಿವಮೊಗ್ಗ ಜಿಲ್ಲೆ ತ್ಯಾವರೆಕೊಪ್ಪನಲ್ಲಿರುವ ಹುಲಿ ಮತ್ತು ಸಿಂಹ ರಕ್ಷಿತಾರಣ್ಯದಲ್ಲಿ (Tyavarekoppa Tiger-Lion Reserve) ಎರಡು ಸಿಂಹಗಳ ನಡುವೆ ನಡೆದ ಭೀಕರ ಕಾದಾಟದ ಬಗ್ಗೆ ವರದಿ ಮಾಡಿದ್ದೆವು. ಆದರೆ, ಮಂಗಳವಾರ ಬಹಳ ವಿಷಾದದಿಂದ ನಿಮ್ಮ ಗಮನಕ್ಕೆ ತರಬಯಸುವ ಸಂಗತಿಯೇನೆಂದರೆ, ಆವತ್ತಿನ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಸಿಂಹಿಣಿ (lioness) ಒಂದು ವಾರದವರೆಗೆ ಸಾವಿನೊಂದಿಗೆ ಹೋರಾಟ ನಡೆಸಿ ಸಾವನ್ನಪ್ಪಿದೆ. 11 ವರ್ಷ ವಯಸ್ಸಿನ ಮಾನ್ಯಾಗೆ (Manya) ಧಾಮಲ್ಲಿರುವ ಪಶು ಚಿಕಿತ್ಸಾಲಯಲ್ಲಿ (veterinary hospital) ಟ್ರೀಟ್​ಮೆಂಟ್ ನೀಡಲಾಗುತಿತ್ತು. ವೈದ್ಯರು ಮತ್ತು ರಕ್ಷಿತಾರಣ್ಯದ ಸಿಬ್ಬಂದಿ ಮಾನ್ಯಳನ್ನು ಉಳಿಸಲು ಶಕ್ತಿಮೀರಿ ಪ್ರಯತ್ನಿದರಾದರೂ ಅದು ಸಾಧ್ಯವಾಗಲಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾನ್ಯಳ ಅಂತ್ಯಕ್ರಿಯೆ ತ್ಯಾವರೆಕೊಪ್ಪ ಲಯನ್ ಸಫಾರಿ ಆವರಣದಲ್ಲಿ ನಡೆಸಲಾಗಿದೆ.  

ಕಾಡುಗಳಲ್ಲಿ, ಮೃಗಾಲುಗಳಲ್ಲಿ ವನ್ಯಜೀವಿಗಳ ಮಧ್ಯೆ ಕಾದಾಟಗಳು ನಡೆಯುವುದು ಅಪರೂಪವೇನಲ್ಲ. ಕೆಲವು ಸಲ ದುರ್ಬಲವಾಗಿರುವ ಪ್ರಾಣಿಗೆ ಹೋರಾಟ ಮುಂದುವರಿಸುವುದು ತನ್ನಿಂದಾಗದು ಅಂತ ಮನವರಿಕೆಯಾದ ಕೂಡಲೇ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿಬಿಡುತ್ತದೆ. ಆದರೆ ಸೋಲುವುದು ಖಚಿತವಾಗಿದ್ದರೂ ಹಟಕ್ಕೆ ಬಿದ್ದು ಕಾದಾಟ ಮುಂದುವರೆಸಿದರೆ ಅದು ದುರ್ಬಲ ಪ್ರಾಣಿಯ ಸಾವಿನಲ್ಲಿ ಪರ್ಯಾವಸನಗೊಳ್ಳುತ್ತದೆ. ತ್ಯಾವರೆಕೊಪ್ಪ ಲಯನ್ ಮತ್ತು ಟೈಗರ್ ಸಫಾರಿಯಲ್ಲಿ ಆಗಿರುವುದು ಅದೇ.

ಗತಿಸಿರುವ ಮಾನ್ಯ ಮತ್ತು ಇದೇ ಧಾಮದ 7 ವರ್ಷ ವಯಸ್ಸಿನ ಗಂಡು ಸಿಂಹ ಯಶವಂತ ನಡುವೆ ಅದ್ಯಾಕೆ ಜಗಳ ಹುಟ್ಟಿಕೊಂಡಿತೋ ಗೊತ್ತಿಲ್ಲ. ಬಹಳ ಜಿದ್ದು ಮತ್ತು ನಾವು ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಸಿಟ್ಟಿನಲ್ಲಿ ಮಾನ್ಯ ಮತ್ತು ಯಶವಂತ್​ ಕಾದಾಡಿದವು. ಪ್ರಾಯಶ: ಯಶವಂತನ ಕೈ ಮೇಲಾಗುತ್ತಿರುವುನ್ನು ಅರಿತು ಮಾನ್ಯ ಸೋಲೊಪ್ಪಿಕೊಂಡಿದ್ದರೆ ಅದರ ಪ್ರಾಣ ಉಳಿಯುತ್ತಿತ್ತೇನೋ? ಅದರೆ ಅದರ ಹಣೆಬರಹದಲ್ಲಿ ಸಾವು ಹಾಗೆ ಬರೆದಿತ್ತು ಅಂತಾದರೆ, ಯಾರೇನು ಮಾಡಲಾದೀತು? ಮಾನ್ಯಳ ಸಾವಿನೊಂದಿಗೆ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ ಇರುವ ಸಿಂಹಗಳ ಸಂಖ್ಯೆ 5 ಕ್ಕೆ ಇಳಿದಿದೆ.

ಅಂದಹಾಗೆ, ತ್ಯಾವರೆಕೊಪ್ಪ ಹುಲಿ-ಸಿಂಹ ರಕ್ಷಿತಾರಣ್ಯವು ಶಿವಮೊಗ್ಗದಿಂದ ಸುಮಾರು 10 ಕಿಮೀ ದೂರ ಶಿವಮೊಗ್ಗ-ಸಾಗರ ರಸ್ತೆಯಲ್ಲಿದೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಸದರಿ ಕಾದಿಟ್ಟ ಅರಣ್ಯವು 200 ಹೆಕ್ಟೇರ್ ಪ್ರದೇಶವನ್ನು ಆವರಿಸಿದೆ.

ಒಂದು ನಿರ್ದಿಷ್ಟವಾದ ಉದ್ದೇಶದಿಂದ ತ್ಯಾವರೆಕೊಪ್ಪ ಹುಲಿ-ಸಿಂಹ ರಕ್ಷಿತಾರಣ್ಯವನ್ನು ಸ್ಥಾಪಿಸಲಾಗಿದೆ. ಭಾರತಾದ್ಯಂತ ಇರುವ ಸರ್ಕಸ್​​ಗಳಿಂದ ರಕ್ಷಿಸಿದ ಹುಲಿ ಮತ್ತು ಸಿಂಹಗಳಿಗೆ ಇಲ್ಲಿ ಪುನರ್​​​​​ವಸತಿ ಕಲ್ಪಿಸಲಾಗುತ್ತದೆ. ಇದು ಒಂದು ಮುಕ್ತ ಮೃಗಾಲಯವಾಗಿದ್ದು ಪ್ರವಾಸಿಗಳಿಗೆ ಅರಣ್ಯ ಇಲಾಖೆಯ ಸಫಾರಿಗಳ ಏರ್ಪಾಟು ಮಾಡುತ್ತದೆ. ಅಂದಹಾಗೆ, ತ್ಯಾವರೆಕೊಪ್ಪ ಹುಲಿ-ಸಿಂಹ ರಕ್ಷಿತಾರಣ್ಯ ಅಸ್ತಿತ್ವಕ್ಕೆ ಬಂದಿದ್ದು 1998ರಲ್ಲಿ.

ಇದನ್ನೂ ಓದಿ:  ಶಿವಮೊಗ್ಗದಲ್ಲಿ ಸಾಕು ನಾಯಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಮಾಲೀಕ; ಪ್ರೀತಿಯ ಶ್ವಾನಕ್ಕೆ ನೀಡಿದ ದುಬಾರಿ ಗಿಫ್ಟ್ ನೋಡಿ