AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂದಾಪುರ, ಭದ್ರಾವತಿ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ: ಸಂಧಾನದಿಂದ ಸಮಸ್ಯೆ ಪರಿಹರಿಸಲು ಯತ್ನ

ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ

ಕುಂದಾಪುರ, ಭದ್ರಾವತಿ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ: ಸಂಧಾನದಿಂದ ಸಮಸ್ಯೆ ಪರಿಹರಿಸಲು ಯತ್ನ
ಕುಂದಾಪುರ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಮತ್ತು ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 02, 2022 | 4:02 PM

Share

ಉಡುಪಿ: ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 27 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದಾರೆ. ಇದರೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಸಿ, ಮುಸ್ಲಿಂ ಪೋಷಕರ ಮನವೊಲಿಸಲು ಯತ್ನಿಸಿದರು. ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಮಧ್ಯಪ್ರವೇಶಿಸುವಂತೆ ಕೋರಿದರು.

27 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾದ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ತರಗತಿಗಳಿಗೆ ಬಂದರು. ಈಚೆಗಷ್ಟೇ ಉಡುಪಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಮಾನದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಧರಿಸಿ ಮಾತ್ರ ಬರಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿತ್ತು. ಮುಸ್ಲಿಂ ಪೋಷಕರೊಂದಿಗೆ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕರೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಬಿ.ಸಿ.ನಾಗೇಶ್ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಒಳಗೆ ಸಮವಸ್ತ್ರ ಧರಿಸಿ ಮಾತ್ರವೇ ಬರಲು ಅವಕಾಶವಿದೆ ಎಂದು ಸಚಿವರು ಸ್ಪಷ್ಟವಾಗಿ ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಪ್ರಕಾಶ್ ಕುಕ್ಕೆಹಳ್ಳಿ, ‘ಸರ್ಕಾರದ ನಿಯಮ ಪಾಲಿಸಲು ನಾವು ಬದ್ಧ. ಆದರೆ, ಅವರು ಹಿಜಬ್ ಧರಿಸಿ ಶಾಲೆಗೆ ಬಂದರೆ ನಮ್ಮ ಕಾರ್ಯಕರ್ತ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಾರೆ’ ಎಂದರು.

ಭದ್ರಾವತಿ ಕಾಲೇಜಿನಲ್ಲೂ ಹಿಜಾಬ್-ಕೇಸರಿ ಶಾಲು ಸದ್ದು ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವುದು ವಿರೋಧಿಸಿ, ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ. ಕಾಲೇಜಿನ ಒಳಗೆ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ (ಫೆ.2) ವಿವಾದವು ತಾರಕಕ್ಕೇರಿತ್ತು.

ಕಾಲೇಜ್ ಕ್ಯಾಂಪಸ್​ನಲ್ಲಿ ನಡೆದ ಒಂದು ಸಣ್ಣ ಘಟನೆ ಇದೀಗ ವಿಕೋಪಕ್ಕೆ ತಿರುಗಿದೆ. ಜನವರಿ 27ರಂದು ಕಾಲೇಜ್ ಕ್ಯಾಂಪಸ್​ಗೆ ಬಂದಿದ್ದ ಹೊರಗಿನ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯ ಫೋಟೊ ತೆಗೆದಿದ್ದ. ಇದನ್ನು ಕಾಲೇಜು ವಿದ್ಯಾರ್ಥಿಗಳ ವಿರೋಧಿಸಿದಾಗ ಆ ಯುವಕ ಕಾಲೇಜು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದ. ಕೆಲ ವಿದ್ಯಾರ್ಥಿಗಳು ಅವನನ್ನು ಥಳಿಸಿದ್ದರು. ಈ ಪೈಕಿ ಓರ್ವ ವಿದ್ಯಾರ್ಥಿಯ ಮೇಲೆ ಕೆಲವರು ಭದ್ರಾವತಿ ನಗರದ ಟಿಕೆ ರೋಡ್​ನಲ್ಲಿ ಜ.28ರಂದು ಗುಂಪು ಹಲ್ಲೆ ಮಾಡಿದ್ದರು.

ಈ ಘಟನಾ ಸರಪಳಿಯ ಮುಂದುವರಿದ ಭಾಗ ಎನ್ನುವಂತೆ ಕಾಲೇಜಿನ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಕ್ರೋಶ ಹೊರಹಾಕಿದ್ದಾರೆ. ಬುರ್ಖಾ ಮತ್ತು ಹಿಜಾಬ್ ಧರಿಸಿ ಕ್ಲಾಸ್ ರೂಂಗೆ ಬರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇಂದು ಕೂಡಾ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕೇಸರಿ ಶಾಲ್ ಹಾಕಿಕೊಂಡು ಕಾಲೇಜಿಗೆ ಬಂದಿದ್ದರು. ಅಹಿತರಕ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲ ಡಾ.ಉಮಾಶಂಕರ, ಕೆಲವರು ಕಾಲೇಜಿನ ಬಗ್ಗೆ ತಪ್ಪು ಸಂದೇಶ ನೀಡಲು ಯತ್ನಿಸುತ್ತಿದ್ದಾರೆ. ಕಾಲೇಜಿನಲ್ಲಿ 2010ರಿಂದ ವಸ್ತಸಂಹಿತೆ ಜಾರಿಯಲ್ಲಿದೆ. ಕಾಲೇಜಿನ ತರಗತಿಗಳಿಗೆ ಕಡ್ಡಾಯವಾಗಿ ಸಮವಸ್ತ್ರದಲ್ಲಿಯೇ ಬರಬೇಕು. ಬುಧವಾರ ಮತ್ತು ಶನಿವಾರ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ ಎಂದು ಅವರು ಹೇಳಿದ್ದಾರೆ. ಈ ನಡುವೆ ಇದೀಗ ಹಿಜಾಬ್ ಧರಿಸುವ ಸಂಬಂಧ ವಿನಾಕಾರಣ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಬದಲಿಸಿ ಸಮವಸ್ತ್ರದಲ್ಲಿ ತರಗತಿಗೆ ಹೋಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಾಚಾರ್ಯರ ಸ್ಪಷ್ಟನೆಯನ್ನು ಕೆಲ ವಿದ್ಯಾರ್ಥಿಗಳು ಒಪ್ಪುತ್ತಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿಯೇ ಕೂರುತ್ತಾರೆ. ಅವರಿಗೆ ಅವಕಾಶ ನೀಡಿದರೆ ನಮಗೂ ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಜಾಬ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್​ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ವಾದ ಮಾಡಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದೂ ಧಾರ್ಮಿಕ ಹಕ್ಕಿನ ಭಾಗ ಆಗಿದೆ. ಆದರೆ ಹಿಜಾಬ್ ಧರಿಸಲು ಕಾಲೇಜು ಅನುಮತಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.

ಉಡುಪಿಯ ಸರ್ಕಾರಿ ಮಹಿಳಾ ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸೋಮವಾರ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಕಾಲೇಜಿನ ಆಡಳಿತ ಮಂಡಳಿ, ಡಿಡಿಪಿಯು ಸಭೆಯಲ್ಲಿ ಭಾಗಿ ಆಗಿದ್ದರು. ಒಂದೂವರೆ ತಿಂಗಳುಗಳ ಕಾಲ ಈ ವಿವಾದ ನಡೆಯಿತು. ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ ಇದೆ. ಕಾಲೇಜಿಗೆ ಬರದಿದ್ದರೆ ಆನ್ಲೈನ್ ಕ್ಲಾಸ್ ಅವಕಾಶ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೆಸರಿಗಾಗಿ ಹಟ ಮಾಡುವುದು ಸರಿಯಲ್ಲ. ಹಿಜಾಬ್​ಗೆ ನಮ್ಮ ವಿರೋಧ ಇಲ್ಲ ಅದು ಇಸ್ಲಾಂನ ಪದ್ಧತಿ. ಶರಿಯತ್ ಆಧಾರಿತ ರಾಷ್ಟ್ರ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರ ಬೇರೆ. ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಹಿಜಾಬ್ ತೆಗೆದು ಕ್ಲಾಸಿಗೆ ಬರುವುದಾದರೆ ಬನ್ನಿ; ಹಿಜಾಬ್ ಧರಿಸಿ ಪಾಠ ಕೇಳುವ ಅವಕಾಶ ಇಲ್ಲ: ಸಭೆಯಲ್ಲಿ ತೀರ್ಮಾನ ಇದನ್ನೂ ಓದಿ: ಉಡುಪಿ ಕಾಲೇಜಿನ ಹಿಜಾಬ್ ವಿಚಾರ: ಹಿಂದೆ ಯಾವತ್ತೂ ಇರದ ಸಮಸ್ಯೆ ಈ ವರ್ಷ ಆರಂಭವಾಗಿದೆ ಎಂದರು ಶಿಕ್ಷಣ ಸಚಿವ ಬಿಸಿ ನಾಗೇಶ