ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ಪಟ್ಟಣದ ಎಂಟು ಕಡೆಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣದ ಸ್ಪ್ರೇ ಪೇಂಟ್ಗಳನ್ನು ಬಳಕೆ ಮಾಡಿ ಜಾಯಿನ್ ಸಿಎಫ್ಐ(Join CFI) ಎಂದು ಬರೆಯಲಾಗಿದೆ. ಸರ್ಕಾರ ಈಗಾಗಲೇ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದ್ದರೂ ಸಹ ಆ ಸಂಘಟನೆ ಬಗ್ಗೆ ಗೋಡೆ ಮೇಲೆ ಬರೆದವರ ವಿರುದ್ಧ ಶಿರಾಳಕೊಪ್ಪ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಗೋಡೆ ಬರಹ ಬರೆದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ನವೆಂಬರ್ 27ರಂದು ತಡರಾತ್ರಿ ಶಿರಾಳಕೊಪ್ಪದ ಹಳ್ಳೂರು ಕೇರಿ, ಭೋವಿ ಕಾಲನಿ, ಸಣ್ಣ ಬ್ಯಾಣದ ಕೇರಿ, ದೊಡ್ಡ ಬ್ಯಾಣದ ಕೇರಿ, ಹಿರೆಕೆರೂರ ರಸ್ತೆ, ಶಿಕಾರಿಪುರ ರಸ್ತೆಯ ಅಲ್ಲಲ್ಲಿ ಜಾಯಿನ್ ಸಿಎಫ್ಐ ಎಂದು ಬರೆದಿರುವುದನ್ನು ನವೆಂಬರ್ 28ರ ಬೆಳಗಿನ ಜಾವ ಬೀಟ್ ಪೊಲೀಸರು ಗಮನಿಸಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಳಿಕ ಗೋಡೆ ಬರಹಗಳಿಗೆ ಬಣ್ಣ ಬಳಿದು ಅಳಿಸಿಹಾಕಿದ್ದಾರೆ. ಜೊತೆಗೆ ನಿಷೇಧಿತ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದ ಕಿಡಿಗೇಡಿಗಳ ಬಂಧನಕ್ಕೆ ಬಲೆಯನ್ನು ಬೀಸಿದ್ದು, ಈ ಬಗ್ಗೆ ಕುಲಂಕಷ ತನಿಖೆ ಆರಂಭಿಸಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗೋಡೆ ಬರಹ ಬರೆಯುವವರು ಹೇಡಿಗಳು, ಪಿಎಫ್ಐ ಎಂದು ಕೂಡ ಎದುರುಗಡೆ ಬಂದು ಹೋರಾಟ ಮಾಡುವುದಿಲ್ಲ, ಕತ್ತಲೆಯಲ್ಲಿ ಬಂದು ಕೊಲೆ ಮಾಡುವಂತಹ ಕೆಲಸಗಳನ್ನು ಮಾಡುತ್ತಾರೆ. ಅವರಿಗೆ ದೇಶ ಅಭಿವೃದ್ಧಿಯಾಗಬೇಕು ಎನ್ನುವ ಮನಸ್ಸಿಲ್ಲ ದೇಶದಲ್ಲಿ ಗಲಭೆ ಎಬ್ಬಿಸಬೇಕು, ದೇಶದಲ್ಲಿ ಹಿಂದೂತ್ವವನ್ನು ಅಳಿಸಬೇಕು ಎನ್ನುವ ಉದ್ದೇಶದಿಂದ ಪಿಎಫ್ಐ ಸಂಘಟನೆ ಮಾಡುತ್ತಿರುವ ದೇಶದ್ರೋಹಿ ಕೆಲಸ, ಇದು ಬಹಳ ದಿನ ನಮ್ಮ ದೇಶದಲ್ಲಿ ನಡೆಯಲ್ಲ ಎಂದಿದ್ದಾರೆ.
ಇದನ್ನೂ ಓದಿ:PFI Ban: ನಾಸೀರ್ ಪಾಷಾ ಸಲ್ಲಿಸಿದ್ದ ರಿಟ್ ಅರ್ಜಿ ವಜಾ, ಪಿಎಫ್ಐ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸವನ್ನು ಕೆಲ ಸಂಘಟನೆಗಳು ಹಾಗೂ ಕೆಲವರು ಮಾಡುತ್ತಿದ್ದು, ಇವರನ್ನು ಕೂಡಲೇ ಪತ್ತೆ ಹಚ್ಚಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ