ಮಲೆನಾಡಿನ ಇನ್ನೂ ಅನೇಕ ಹಳ್ಳಿಗಳಿಗೆ ಮನೆಯಲ್ಲಿ ಯಾರಾದ್ರೂ ಮೃತಪಟ್ಟರೆ, ಸಾವಿನ ನೋವಿಗಿಂತ ಕುಟುಂಬಸ್ಥರಿಗೆ ಅಂತ್ಯಸಂಸ್ಕಾರ ಮಾಡುವುದು ಹೇಗೆ ಎನ್ನುವುದು ಸಂಕಟಮಯವಾಗಿ ಕಾಡುತ್ತದೆ. ಶಿವಮೊಗ್ಗ (Shivamogga) ತಾಲೂಕಿನ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕಾಗಿ (Lastrites) ಈಗಲೂ ಪರದಾಟುತ್ತಿದ್ದಾರೆ. ನಾಲ್ಕು ದಶಕಗಳ ಅಂತ್ಯಸಂಸ್ಕಾರ ಜಾಗಕ್ಕೆ (Burial Ground) ಗ್ರಾಮಸ್ಥರಿಗೆ ಈಗ ನಿಷೇಧ… ಯಾಕೆ? ಅಂತೀರಾ ಈ ಸ್ಟೋರಿ ನೋಡಿ.
ಶಿವಮೊಗ್ಗ ತಾಲೂಕಿನ ಕಡೆಕಲ್ ಗ್ರಾಮಸ್ಥರಿಗೆ ಕಳೆದ ನಾಲ್ಕು ದಶಕಗಳಿಂದ ಒಂದು ಸ್ಮಶಾನ ಇಲ್ಲ. ಗ್ರಾಮದ ಸಮೀಪದಲ್ಲೇ ಒಂದು ಅರಣ್ಯವಿದೆ. ಅದೇ ಅರಣ್ಯದಲ್ಲಿ ಗ್ರಾಮಸ್ಥರು ಕಳೆದ ನಾಲ್ಕು ದಶಗಳಿಂದ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಆದ್ರೆ ಮೊನ್ನೆಯಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಗಡಿಯನ್ನು ಗುರುತು ಮಾಡಿದ್ದು, ಯಾವುದೇ ಒತ್ತುವರಿ ಆಗದ ಹಾಗೆ ಜೆಸಿಬಿಯಿಂದ ಆಳವಾಗಿರುವ ಟ್ರಂಚ್ ಹೊಡೆದಿದ್ದಾರೆ!
ಈ ನಡುವೆ ಗ್ರಾಮದಲ್ಲಿ ಇತ್ತೀಚೆಗೆ ಅಜ್ಜಿಯೊಬ್ಬರು ಮೃತಪಟ್ಟಿದ್ದಾರೆ. ಇಷ್ಟು ವರ್ಷಗಳಿಂದ ಇದೇ ಅರಣ್ಯದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದ ಗ್ರಾಮಸ್ಥರಿಗೆ ಅಜ್ಜಿಯ ಅಂತ್ಯಕ್ರಿಯೆ ಮಾಡುವುದು ಎಲ್ಲಿ ಎನ್ನುವ ಸಮಸ್ಯೆ ಎದುರಾಗಿತ್ತು. ಒಂದಡೆ ಅಜ್ಜಿ ಮೃತಪಟ್ಟಿರುವ ಕುಟುಂಬಸ್ಥರು ನೋವಿನಲ್ಲಿದ್ದರು. ಈ ನಡುವೆ ಗ್ರಾಮಸ್ಥರೇ ಸೇರಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಅರಣ್ಯ ಇಲಾಖೆ ಹಾಕಿರುವ ಟ್ರಂಚ್ ಗೆ ಮರದ ತುಂಡುಗಳನ್ನು ಜೋಡಿಸಿದ್ದಾರೆ. ಇದರ ಮೇಲೆಯೇ ಶವವನ್ನು ಹೊತ್ತುಕೊಂಡು ಹೋಗಿ ಅಜ್ಜಿಯ ಅಂತ್ಯಸಂಸ್ಕಾರ ಮಾಡಿ ಬಂದಿದ್ದಾರೆ ಎನ್ನುತ್ತಾರೆ ಗ್ರಾಮದ ಮುಖಂಡರಾದ ಶಿವಪ್ಪ.
ಇದನ್ನೂ ಓದಿ:
ಆಳವಾಗಿರುವ ಟ್ರಂಚ್ ನ ಎರಡೂ ತುದಿಗೆ ಹಾಕಿರುವ ಮರದ ತುಂಡಿನ ಮೇಲೆ ಜನರು ಈಗ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಜ್ಜಿಯ ಅಂತ್ಯಕ್ರಿಯೆ ಮಾಡಿದ್ದೇ ಗ್ರಾಮಸ್ಥರ ಒಂದು ದೊಡ್ಡ ಸಾಹಸವಾಗಿತ್ತು. ಅಜ್ಜಿಯ ಶವವನ್ನು ಹೊತ್ತುಕೊಂಡ ಜನ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಡಿನೊಳಗೆ ಹೋಗಿದ್ದರು. ಅಂತೂಇಂತೂ ಹರಸಾಹಸಪಟ್ಟು ಗ್ರಾಮಸ್ಥರು ಅಜ್ಜಿಯ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.
ಜೊತೆಗೆ, ತಾತ್ಕಾಲಿಕವಾಗಿ ಅರಣ್ಯಕ್ಕೆ ಹೋಗಲು ದಾರಿ ಮಾಡಿಕೊಂಡಿದ್ದಾರೆ. ಇದು ಅರಣ್ಯ ಇಲಾಖೆಗೆ ಗೊತ್ತಾದ್ರೆ ಸಾಕು… ಆ ತಾತ್ಕಾಲಿಕ ಮರದ ತುಂಡಿನ ಜೋಡಣೆಯ ದಾರಿಯನ್ನು ಕಿತ್ತುಹಾಕುತ್ತಾರೆ! ಶಿವಮೊಗ್ಗ ತಾಲೂಕಿನ ಕಡೇಕಲ್ ಗ್ರಾಮವು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಗ್ರಾಮಸ್ಥರು ನಾಲ್ಕು ದಶಕಗಳಿಂದ ಇದೇ ಶೆಟ್ಟಿ ಹಳ್ಳಿಯ ಅಭಯಾರಣ್ಯ ವ್ಯಾಪ್ತಿಯ ಅರಣ್ಯದಲ್ಲಿ ಮೃತರ ಅಂತ್ಯಕ್ರಿಯೆ ಮಾಡುತ್ತಿದ್ದರು.
ಆದ್ರೆ ಈಗ ಅದಕ್ಕೂ ಅರಣ್ಯ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಗ್ರಾಮಸ್ಥರು ಸದ್ಯ ಮತ್ತೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೇ ಅಂತ್ಯಕ್ರಿಯೆ ಮಾಡುವುದು ಎಲ್ಲಿ ಎನ್ನುವ ಪ್ರಶ್ನೆಯ ತೊಳಲಾಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಐದು ಎಕರೆ ಸ್ಮಶಾನ ಜಾಗ ನೀಡುವುದಕ್ಕೆ ಒತ್ತಾಯಿಸಿದ್ದಾರೆ ಎಂದು ಗ್ರಾಮಸ್ಥ ಮಂಜಪ್ಪ ಮಾಹಿತಿ ನೀಡಿದ್ದಾರೆ.
ಮಲೆನಾಡಿನಲ್ಲಿ ಕಾಡಿನಂಚಿನ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ. ಗ್ರಾಮಸ್ಥರು ಇನ್ನೂ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮೃತಪಟ್ಟ ಮೇಲೆ ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರಿಗೆ ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕ್ಷೇತ್ರದ ಶಾಸಕ ಮತ್ತು ಸಚಿವರ ಆರಗ ಜ್ಞಾನೇಂದ್ರ ಅವರು ಈ ಗ್ರಾಮದ ಸ್ಮಶಾನದ ಸಮಸ್ಯೆ ಬಗ್ಗೆ ಗಮನಹರಿಸಬೇಕಿದೆ.
ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ