
ಬೆಂಗಳೂರು, ಅಕ್ಟೋಬರ್ 08: ಸುಪ್ರೀಂಕೋರ್ಟ್ (Supreme Court) ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನ್ಯಾಯಾಂಗ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಈ ಘಟನೆ ಎಲ್ಲೆಡೆ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಫ್ಐಆರ್ (FIR) ಒಂದು ದಾಖಲಾಗಿದೆ.
ವಕೀಲ ಭಕ್ತವತ್ಸಲ ಎಂಬುವವರು ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ಬಿಎನ್ಎಸ್ 132, 133ರ ಅಡಿ ಎಫ್ಐಆರ್ ದಾಖಲಾಗಿದೆ. ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆದಿರುವ ರಾಕೇಶ್ ಕಿಶೋರ್ ವಿರುದ್ಧ ಸೂಕ್ತ ಕ್ರಮಕ್ಕೆ ಭಕ್ತವತ್ಸಲ ಒತ್ತಾಯಿಸಿದ್ದಾರೆ.
ಘಟನೆ ಕುರಿತಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ವಕೀಲ ಎಂದು ಹೇಳಿಕೊಳ್ಳುವ ವ್ಯಕ್ತಿ ಸಿಜೆಐ ಮೇಲೆ ಚಪ್ಪಲಿ ಎಸೆದಿದ್ದಾನೆ. ಧರ್ಮದ ಹೆಸರಲ್ಲಿ ಆ ವ್ಯಕ್ತಿ ಸಿಜೆಐ ಮೇಲೆಯೇ ಚಪ್ಪಲಿ ಎಸೆದಿದ್ದಾನೆ. ಇದನ್ನು ವೈಯುಕ್ತಿಕವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಸಿಜೆಐ ಮೇಲೆ ಶೂ ಎಸೆತ ಕೇಸ್: ಅ 16ರಂದು ವಿಜಯಪುರ ನಗರ ಬಂದ್ಗೆ ಕರೆ
ಧರ್ಮದ ಹೆಸರಿನಲ್ಲಿ ಸಿಜೆಐಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಸಮಾಜವನ್ನು ಹಾಳು ಮಾಡಲು ಹೊರಟಿದ್ದಾರೆ. ಇಂತಹವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಗತಿಪರ ವಿಚಾರಧಾರೆ ಇರುವವರು ಮಾತ್ರ ಖಂಡನೆ ಮಾಡಿದ್ದಾರೆ. ಈ ಕೃತ್ಯವನ್ನು ಸಾರ್ವಜನಿಕವಾಗಿ ದೊಡ್ಡಮಟ್ಟದಲ್ಲಿ ಖಂಡಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಗಿರಿಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕೃತ್ಯ ಖಂಡಿಸಲು ಪ್ರಧಾನಿ ಮೋದಿಗೆ 9 ಗಂಟೆ ಬೇಕಾಯಿತು. ಸಿಜೆಐ ದೊಡ್ಡ ಮನುಷ್ಯರು, ಹಾಗಾಗಿ ಹೋಗಲಿ ಬಿಡಿ ಎಂದರು. ಪ್ರಧಾನಿ ಹೊರತುಪಡಿಸಿ ಬಿಜೆಪಿಯ ಯಾರೂ ವಿರೋಧಿಸಲಿಲ್ಲ. ಶೂ ಎಸೆದ ಪ್ರಕರಣವನ್ನು ಬೆಂಬಲಿಸುವ ಜನರು ಇದ್ದಾರೆ ಅಂದರೆ ಎಂತಹ ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ಸುಪ್ರೀಂಕೋರ್ಟ್ ವಿಚಾರಣೆ ಶುರುವಾಗಿತ್ತು. ಒಂದಷ್ಟು ಕಲಾಪ ಕೂಡ ನಡೆದಿತ್ತು. ಈ ವೇಳೆ ಸನಾತನ ಧರ್ಮಕ್ಕೆ ಅಪಮಾನವಾದರೆ ಸಹಿಸಲ್ಲ ಎಂದು ಏಕಾಏಕಿ ಘೋಷಣೆ ಕೂಗಿದ ರಾಕೇಶ್ ಕಿಶೋರ್ ಅನ್ನೋ 71 ವರ್ಷದ ವಕೀಲನೊಬ್ಬ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠದತ್ತಲೇ ಬೂಟನ್ನ ಎಸೆದಿದ್ದ. ಆದರೆ ಆತ ಎಸೆದ ಶೂ ಸಿಜೆಐ ಪೀಠದ ಅಣತಿ ದೂರದಲ್ಲಿ ಬಿದ್ದಿದ್ದು, ಗವಾಯಿ ಅವರಿಗೆ ತಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:07 pm, Wed, 8 October 25