ಕೆಎಸ್​ಆರ್​ಟಿಸಿಗೆ ಚಾಲಕರ ಕೊರತೆ, 7 ವರ್ಷಗಳಿಂದ ಆಗಿಲ್ಲ ನೇಮಕಾತಿ: ಶಕ್ತಿ ಯೋಜನೆ ಜಾರಿಗೊಳಿಸುವ ಸಂಸ್ಥೆಗೇ ಇಲ್ಲ ಶಕ್ತಿ!

| Updated By: ಗಣಪತಿ ಶರ್ಮ

Updated on: Jun 24, 2024 | 6:53 AM

KSRTC Bus; ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕನ್ನಡ ಬಾರದ ಚಾಲಕರ ನೇಮಕ ಮಾಡಿಕೊಳ್ಳುತ್ತಿರುವ ವಿಚಾರ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ, ಇದೀಗ ಕೆಎಸ್​ಆರ್​​ಟಿಸಿ ಬಸ್​ಗಳು ಚಾಲಕರ ಭಾರಿ ಕೊರತೆ ಎದುರಿಸುತ್ತಿರುವುದು ತಿಳಿದುಬಂದಿದೆ. ಸಂಸ್ಥೆ ಕಳೆದ ಏಳು ವರ್ಷಗಳಿಂದ ನೇಮಕಾತಿಯೇ ಮಾಡಿಕೊಂಡಿಲ್ಲ. ಇದೀಗ ಡ್ರೈವರ್​ ಕೊರತೆ ನೀಗಿಸಲು ಸಂಸ್ಥೆ ಏನು ಮಾಡಿದೆ? ಇಲ್ಲಿದೆ ವಿವರ.

ಕೆಎಸ್​ಆರ್​ಟಿಸಿಗೆ ಚಾಲಕರ ಕೊರತೆ, 7 ವರ್ಷಗಳಿಂದ ಆಗಿಲ್ಲ ನೇಮಕಾತಿ: ಶಕ್ತಿ ಯೋಜನೆ ಜಾರಿಗೊಳಿಸುವ ಸಂಸ್ಥೆಗೇ ಇಲ್ಲ ಶಕ್ತಿ!
ಕೆಎಸ್​ಆರ್​ಟಿಸಿ ಬಸ್
Follow us on

ಬೆಂಗಳೂರು, ಜೂನ್ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಕಳೆದ ಏಳು ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಈ ಅವಧಿಯಲ್ಲಿ ಬರೋಬ್ಬರಿ 14 ಸಾವಿರ ನೌಕರರು ನಿವೃತ್ತಿಯಾಗಿದ್ದಾರೆ. ಶಕ್ತಿ ಯೋಜನೆ (Shakti Scheme) ಆರಂಭವಾದ ಮೇಲಂತೂ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಆದರೆ ಸರಿಯಾಗಿ ಕಂಡಕ್ಟರ್, ಡ್ರೈವರ್ (Driver) ಇಲ್ಲದೆ ಖಾಸಗಿ ಏಜೆನ್ಸಿಗಳ‌ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಂಸ್ಥೆಯ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ ಮಾಡಿಕೊಳ್ಳಲು ಕೆಎಸ್ಆರ್​​ಟಿಸಿ ಟೆಂಡರ್ ಕರೆದಿದೆ. 1,260 ಹೊರಗುತ್ತಿಗೆ ಚಾಲಕರ ನೇಮಕ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಚಾಲಕರ ಕೊರತೆ ಹಿನ್ನಲೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲು ಕೆಎಸ್ಆರ್​​ಟಿಸಿ ಪ್ರಕ್ರಿಯೆ ಆರಂಭಿಸಿದೆ. ಕೆಎಸ್ಆರ್​​ಟಿಸಿಯಲ್ಲಿ ಕಳೆದ ಏಳು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ, ಚಾಲಕರ ಕೊರತೆ ಎದುರಿಸುವಂತಾಗಿದೆ. ಇದೀಗ 2,200 ಚಾಲಕ ಕಂ ನಿರ್ವಾಹಕರ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿ ಅಂತಿಮ ಹಂತದಲ್ಲಿದೆ. ಆದರೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಎಲ್ಲಾ ತರಬೇತಿ ‌ಮುಗಿದು ಅವರೆಲ್ಲ ಡ್ಯೂಟಿಗೆ ಬರಲು ವರ್ಷವೇ ಬೇಕು.

ರಾಮಲಿಂಗಾರೆಡ್ಡಿ ಹೇಳುವುದೇನು?

ಅದಕ್ಕೆ ಹೊಸದಾಗಿ 1,260 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಕೆಎಸ್ಆರ್​​ಟಿಸಿ ಮುಂದಾಗಿದೆ. ಈ ಬಗ್ಗೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 2016 ರಲ್ಲಿ ರಿಂದ ನೇಮಕಾತಿ ಮಾಡಿಲ್ಲ. ಸದ್ಯ 14 ಸಾವಿರ ನೌಕರರು ನಿವೃತ್ತಿಯಾಗಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 9 ಸಾವಿರ ‌ನೌಕರರ ನೇಮಕಾತಿಗೆ ಆದೇಶ ಮಾಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ 1680, ಕೆಎಸ್ಆರ್​​ಟಿಸಿಯಲ್ಲಿ 2500 ಡ್ರೈವರ್ ಕಂ ಕಂಡಕ್ಟರ್​​ಗಳು, ವಾಯುವ್ಯ ಕರ್ನಾಟಕದಲ್ಲಿ ಒಂದು ಸಾವಿರ ಕಂಡಕ್ಟರ್, ಒಂದು ಸಾವಿರ ಡ್ರೈವರ್​ಗಳು ಹಾಗೂ ಬಿಎಂಟಿಸಿಯಲ್ಲಿ ಎರಡು ಸಾವಿರ ಕಂಡಕ್ಟರ್ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಅವರೆಲ್ಲ ಬಂದ ಮೇಲೆ ಖಾಸಗಿ ಏಜೆನ್ಸಿಯವರು ಇರುವುದಿಲ್ಲ. ಅವರು ಕೂಡ ನಮ್ಮ ನೇಮಕಾತಿ ಪ್ರಕ್ರಿಯಲ್ಲಿ ಭಾಗಿಯಾಗಬಹುದು‌ ಎಂದಿದ್ದಾರೆ.

ಸಾರಿಗೆ ನೌಕರರ ಮುಖಂಡರಿಂದ ಆಕ್ಷೇಪ

ಡ್ರೈವರ್ ಕಂ ಕಂಡಕ್ಟರ್​​ಗಳ ನೇಮಕಾತಿಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿರುವ ನಿಗಮವು, ಹೊರಗುತ್ತಿಗೆ ಆಧಾರದಲ್ಲಿ ಚಾಲಕರನ್ನು ಪೂರೈಸುವ ಸಂಸ್ಥೆಗೆ ಬಿಡ್‌ ಸಲ್ಲಿಸುವಂತೆ ಸೂಚಿಸಿದೆ. ಸದ್ಯ ನೇಮಕವಾಗಲಿರುವ ಹೊರಗುತ್ತಿಗೆ ಚಾಲಕರು ನಿಗಮದ 11 ಜಿಲ್ಲೆ ಮತ್ತು ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೀಗೆ ನೇಮಕವಾಗಲಿರುವ ಚಾಲಕರಿಗೆ 20,676 ರೂ. ವೇತನ ದೊರೆಯಲಿದೆ.

ಇದನ್ನೂ ಓದಿ: ಬರಲಿದೆ ಹೊಸ ಮಾದರಿಯ ಕೆಎಸ್ಆರ್‌ಟಿಸಿ ಬಸ್: ಏನಿದರ ವಿಶೇಷ? ಇಲ್ಲಿದೆ ಮಾಹಿತಿ

ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಮುಖಂಡ ಚಂದ್ರಶೇಖರ್, ನೇಮಕಾತಿ ಪ್ರಕ್ರಿಯೆ ಬೇಗ ಮುಗಿಸಬೇಕು ಮತ್ತು ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನು ನೇಮಕ ಮಾಡಿಕೊಂಡರೆ ಅಜಾಗರೂಕತೆಯ ಚಾಲನೆ ಮಾಡುತ್ತಾರೆ. ಸಂಸ್ಥೆಯ ಗೌರವ ಮತ್ತು ಬೆಲೆ ಇರುವುದಿಲ್ಲ. ಹಾಗಾಗಿ ಇದು ಸರಿಯಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ