ಮೈಸೂರು: ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ನಿಗಮಗಳ ಖಾಸಗೀಕರಣ ವಿಚಾರವಾಗಿ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿದ್ದು, ಈ ರೀತಿಯ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ. ಕೇಂದ್ರದ ಬಿಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ವಿದ್ಯುತ್ ದರ ಏರಿಕೆ ಕೂಡ ಸರ್ಕಾರದ ಕೈಯಲ್ಲಿ ಇಲ್ಲ. ಇದು ವಿದ್ಯುತ್ ಸರಬರಾಜು ಮಾಡುವವರ ತೀರ್ಮಾನವಾಗಿರುತ್ತದೆ. ಇದರ ಬಗ್ಗೆ ಸರ್ಕಾರ ಏನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಕೀಳುಮಟ್ಟದ ಪದ ಬಳಕೆ ವಿಚಾರ ಪ್ರಸ್ತಾಪಿಸಿದ ಸಚಿವ ಸುನೀಲ್ ಕುಮಾರ್ ಯಾರೂ ಸಹ ಟೀಕೆ ಮಾಡುವ ವಿಚಾರದಲ್ಲಿ ಎಲ್ಲೆ ಮೀರಬಾರದು. ನಾನು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದೇನೆ. ಈ ವಿಚಾರವನ್ನು ಅವರ ಬಳಿಯೇ (ಯತ್ನಾಳ್) ಕೇಳಬೇಕು ಎಂದರು.
ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದಾಗ ನಾನು ಸರ್ಕಾರದ ಸಚಿವನಾಗಿದ್ದೇನೆ. ನಮ್ಮ ಸರ್ಕಾರದ ಜವಾಬ್ದಾರಿ ಇರುವುದು ಕೊರೊನಾ ನಿಯಂತ್ರಣ ಮಾಡುವುದು. ಕಾನೂನು ಮಾಡುವುದು ದೊಡ್ಡದಲ್ಲ ಜನ ಸಹಕಾರ ಕೊಡಬೇಕು. ಜನ ಸಹಕಾರ ಕೊಟ್ಟರೆ ಕೊರೊನಾ ನಿಯಂತ್ರಣ ಮಾಡಬಹುದು.
ಹಾಗಂತ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಬಾರದಾ? ಅಂತಾ ಕೇಳಿದರೆ ವೈಭವೀಕರಣ ಎಲ್ಲಾ ಇರಬೇಕು ಸರಿ. ಆದ್ರೆ ಯಾವೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ಸಂಘ ಸಂಸ್ಥೆಗಳು ಧಾರ್ಮಿಕ ಮುಖಂಡರು ಮಾಡಬೇಕು. ಕೊರೊನಾ ಏರಿಕೆಯ ಗತಿ ಗಮನದಲ್ಲಿ ಇಟ್ಟುಕೊಂಡು ನಿಯಮ ಸಡಿಲಿಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಆರ್‌ಎಸ್‌ಎಸ್ ಅಂದ್ರೆ ತ್ಯಾಗ, ಬಲಿದಾನ, ಸೇವೆ, ಸರಳತೆಯ ಸಂಕೇತ. ಇದನ್ನು ತಿಳಿಯದೆ ಸಂಬಂಧವಿಲ್ಲದ ಹೇಳಿಕೆ ನೀಡುವುದು ಹುಚ್ಚುತನವಾಗುತ್ತದೆ. RSS ಬಗ್ಗೆ ಮಾತಾಡುವ ಮುನ್ನ ಅದರ ಬಗ್ಗೆ ತಿಳಿಯಬೇಕು. ಆರ್‌ಎಸ್‌ಎಸ್ ಬಗ್ಗೆ ಆರ್. ಧ್ರುವನಾರಾಯಣ್ ನೀಡಿರುವ ಹೇಳಿಕೆ ಅದು ಅವರ ಬೌದ್ಧಿಕತೆಯ ದಿವಾಳಿತನ ಎಂದು ಭಾವಿಸುವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದರು.
(show restraint while criticizing others admonished minister v sunil kumar)
Published On - 10:55 am, Wed, 25 August 21