
ಬೆಂಗಳೂರು, (ನವೆಂಬರ್ 19): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಕೆಲವು ನಾಯಕರಿಗೆ ವ್ಯವಸ್ಥೆ ಮಾಡಲಾಗಿದ್ದ ಸೀಟಿಂಗ್ ಅರೇಂಜ್ಮೆಂಟ್ ಬಗ್ಗೆ ಕರ್ನಾಟಕದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯನವರ ಆಸನದ ಕುರಿತು ಚರ್ಚೆ, ಟೀಕೆ, ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಲೀ ಮತ್ತು ಮಾಜಿ ಸಿಎಂಗಳಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರಲಿಲ್ಲ. ತಡವಾಗಿ ಹೋಗಿದ್ದಕ್ಕೆ ಹಿಂದಿನ ಸಾಲಿನಲ್ಲಿ ಕೂರಬೇಕಾಯ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಅಂತೆ ಕಂತೆ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ.
ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ ಎಂದು ಬರೆದುಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ‘Belonging: A Journey of Love’ ಪುಸ್ತಕ ನವದೆಹಲಿಯಲ್ಲಿ ಬಿಡುಗಡೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಇಂಡಿ ಒಕ್ಕೂಟದ ಪ್ರಮುಖ ನಾಯಕರ ಹಾಜರಾಗಿದ್ದರು. ಇನ್ನು ಕರ್ನಾಟಕದಿಂದ ಹಾಲಿ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಆದ್ರೆ, ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಸ್ಥಾನ ನೀಡಿರಲಿಲ್ಲ. ಇನ್ನು, ಸಿದ್ದರಾಮಯ್ಯನವರಿಗೆ ಐದನೇ ಸಾಲಿನಲ್ಲಿ ಕೂರಿಸಲಾಗಿತ್ತು. ಕರ್ನಾಟಕ ಸಿಎಂ ಮತ್ತು ತೆಲಂಗಾಣದ ಸಿಎಂ ರೇವಂತ್ ರೆಡ್ಡಿಗೆ ಎರಡನೇ ಸ್ಥಾನದಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇನ್ನು ಕಾಂಗ್ರೆಸ್ಸಿನ ನಾಲ್ಕು ಮುಖ್ಯಮಂತ್ರಿಗಳು, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಹಾಗೂ ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಸನ ವ್ಯವಸ್ಥೆಯ ಫೋಟೋಗಳು ವೈರಲ್ ಆಗಿದ್ದವು. ವಿಜಯ್ ಅವರು ರಾಹುಲ್ ಗಾಂಧಿ ಪಕ್ಕದಲ್ಲಿ ಕೂತಿದ್ದರೆ, ಇತರರಿಗೆ ಮೊದಲ ಸಾಲಿನಲ್ಲಿ ವ್ಯವಸ್ಥೆ ಇರಲಿಲ್ಲ. ಇದು, ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿತ್ತು.
ಸಿದ್ದರಾಮಯ್ಯನವರನ್ನು ಕಡೆಗಣಿಸಲಾಗುತ್ತಿದೆ. ಅಧಿಕಾರ ಇರುವ ತನಕ ಅಷ್ಟೇ ವರ್ಚಸ್ಸು, ಇಲ್ಲ ಅಂದ್ರೆ ಊಟದಲ್ಲಿನ ಕರಿಬೇವು. ಹಿಂದೂಳಿದ ವರ್ಗದ ನಾಯಕನನ್ನು ಕಾಂಗ್ರೆಸ್ ಹೈಕಮಾಂಡ್ ಅವಮಾನಿಸಿದೆ ಅಂತೆಲ್ಲಾ ವಿಪಕ್ಷಗಳ ನಾಯಕರು ಟೀಕಿಸಿದ್ದರು.
ಇದಕ್ಕೆ ಇದೀಗ ಸ್ವತಃ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದೆ. ಆ ವೇಳೆಗೆ ಮುಂದಿನ ಸಾಲಿನಲ್ಲಿನ ಆಸನಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ, ಹಿಂದಿನ ಸಾಲಿನಲ್ಲಿ ಕೂರಬೇಕಾಯ್ತು ಎಂದು ಸ್ಪಷ್ಟನೆಯೊಂದಿಗೆ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.
Published On - 6:34 pm, Thu, 19 November 26