ಬಿಜೆಪಿ ಸರ್ಕಾರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ತಡೆಹಿಡಿದ ಸಿದ್ದರಾಮಯ್ಯ ಸರ್ಕಾರ

|

Updated on: May 22, 2023 | 8:38 PM

ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ (BJP Govt) ಅವಧಿಯ ಎಲ್ಲಾ ಕಾಮಗಾರಿಗಳ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ತಡೆ ನೀಡಿದೆ.

ಬಿಜೆಪಿ ಸರ್ಕಾರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ತಡೆಹಿಡಿದ ಸಿದ್ದರಾಮಯ್ಯ ಸರ್ಕಾರ
ಸಿದ್ದರಾಮಯ್ಯ
Follow us on

ಬೆಂಗಳೂರು: ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ (BJP Govt) ಅವಧಿಯ ಎಲ್ಲಾ ಕಾಮಗಾರಿಗಳ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ತಡೆ ನೀಡಿದೆ. ಎಲ್ಲಾ ಇಲಾಖೆಗಳು, ನಿಗಮ ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ, ಪಾವತಿಗೆ ತಕ್ಷಣದಿಂದ ತಡೆ ನೀಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ಜತೆಗೆ, ಇನ್ನಷ್ಟೇ ಆರಂಭವಾಗಬೇಕಿರುವ ಕಾಮಗಾರಿಗಳನ್ನೂ ತಡೆಹಿಡಿಯುವಂತೆ ಆದೇಶಿಸಲಾಗಿದೆ.

ಹಿಂದಿನ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರ ನಾಮನಿರ್ದೇಶನವನ್ನೂ ರದ್ದುಗೊಳಿಸಲಾಗಿದೆ. ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳ ಎಲ್ಲಾ ಅಧ್ಯಕ್ಷರು, ನಿರ್ದೇಶಕರು, ಸದಸ್ಯರುಗಳ ನಾಮ ನಿರ್ದೇಶನ ರದ್ದುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯರ್ಶಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬಹುದು? ಇಲ್ಲಿದೆ ಸಲಹೆ

ಇತ್ತೀಚೆಗೆ ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಶನಿವಾರವಷ್ಟೇ ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಜತೆಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ನಂತರ ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ.

16ನೇ ವಿಧಾನಸಭೆಯ ಮೊದಲ ಅಧಿವೇಶನದ‌ ಮೊದಲ ದಿನವಾದ ಸೋಮವಾರ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು ಸೇರಿದಂತೆ ಒಟ್ಟು 182 ಜನರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನೂ 42ಜನರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವುದು ಬಾಕಿ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ