ಕನ್ನಡಿಗರಿಗೆ ಮೀಸಲಾತಿ: ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಸೂದೆಯನ್ನು ತಡೆಹಿಡಿದ ಸರ್ಕಾರ

|

Updated on: Jul 17, 2024 | 10:04 PM

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ (Job Reservation) ಕರ್ನಾಟಕ ಸರ್ಕಾರ (Karnataka Government) ಮಹತ್ವದ ಹೆಜ್ಜೆ ಇಟ್ಟಿದೆ. ಆದ್ರೆ, ಇದಕ್ಕೆ ಉದ್ಯಮದಾರರಿಂದ ವ್ಯಾಪಕ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿದೆ.

ಕನ್ನಡಿಗರಿಗೆ ಮೀಸಲಾತಿ: ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಸೂದೆಯನ್ನು ತಡೆಹಿಡಿದ ಸರ್ಕಾರ
ವಿಧಾನಸೌಧ
Follow us on

ಬೆಂಗಳೂರು, (ಜುಲೈ 17): ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ಮಸೂದೆ ಮಂಡನೆಗೆ ಮುಂದಾಗಿದ್ದ ಸಿದ್ದರಾಮಯ್ಯ ಸರ್ಕಾರದ ನಡೆಗೆ ಉದ್ಯಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ, ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ.

ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ರಾಜ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ, ಈ ವಿಧೇಯಕ ಬೇಡ ಎಂದ ಪೈ

ಸಿಎಂ ಕಚೇರಿಯಿಂದ ಮಾಧ್ಯಮ ಪ್ರಕಟಣೆ


ಇನ್ನು ಈ ಬಗ್ಗೆ ಇದೀಗ ಅಧಿಕೃತವಾಗಿ ಸಿಎಂ ಕಚೇರಿ ಮಾಧ್ಯಮಗ ಪ್ರಕಟಣೆ ಹೊರಡಿಸಿದೆ.  ಕನ್ನಡಿಗರ ಮೀಸಲಾತಿ ವಿಧೇಯಕವನ್ನು ಪುನರ್ ಪರಿಶೀಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್ ಹಾಗೂ ನಾಲ್ಕೂ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುತ್ತೆ. ಕ್ಯಾಬಿನೆಟ್‌ನಲ್ಲಿ ಸೂಕ್ತವಾಗಿ ಮಾಹಿತಿ ಹಂಚಿಕೆಯಾಗದೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಅಧಿವೇಶನದಲ್ಲಿ ವಿಧೇಯಕ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಈ ಮಸೂದೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಂಪನಿಯವರು ವಿರೋಧ ವ್ಯಕ್ತಪಡಿಸಿದ್ದರು. ಕಿರಣ್‌ ಮಜುಂದಾರ್, ಮೋಹನ್​ ದಾಸ್ ಪೈ ಸೇರಿದಂತೆ ಹಲವು ಉದ್ಯಮಿಗಳು ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಟ್ವೀಟ್​ ಡಿಲೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಉದ್ಯಮಿಗಳ ವಿರೋಧಕ್ಕೆ ಮಣಿದ್ರಾ?

ಈ ರೀತಿಯ ಕ್ರಮದಿಂದ ಐಟಿ ಉದ್ಯಮಕ್ಕೆ ತೊಂದರೆಯಾಗಲಿದೆ. ಉದ್ಯಮದಲ್ಲಿ ಗುಣಮಟ್ಟದ ಸೇವೆ ನೀಡಲು ಸಮಸ್ಯೆಯಾಗುತ್ತದೆ ಎಂದು ಉದ್ಯಮಿಗಳು ಆಕ್ಷೇಪ ಎತ್ತಿದ್ದರು. ಕೆಲವರಂತೂ ಇದು ತಾರತಮ್ಯದ ಮಸೂದೆ ಎಂದು ಆಕ್ಷೇಪ ವ್ಯಕ್ತಪಸಿಡಿದ್ದರು. ಅಲ್ಲದೇ ಕೆಲ ಐಟಿ-ಬಿಟಿಗಳು ಸಹ ಸರ್ಕಾರಕ್ಕೆ ನೀಡಿದ್ದವು. ಹೀಗೆ ಉದ್ಯಮ ವಲಯದಲ್ಲಿ ಆಕ್ಷೇಪ ಕೇಳಿಬಂದ ನಂತರ ಎಚ್ಚೆತ್ತ ಸಿದ್ದರಾಮಯ್ಯ ಸರ್ಕಾರ, ಮೀಸಲಾತಿ ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ.

ಮಸೂದೆಯ ಮುಖ್ಯಾಂಶಗಳು

  • ಆಡಳಿತಾತ್ಮಕ ಹುದ್ದೆಗೆ 50% (ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್ ಇತರೆ ಉನ್ನತ ಹುದ್ದೆಗಳು)
  • ಆಡಳಿತೇತರ ಹುದ್ದೆಗೆ 75% (ಕರ್ಕ್‌, ಕೌಶಲ ರಹಿತ, ಅರೆ ಕೌಶಲ ಗುತ್ತಿಗೆ ನೌಕರ)
  • ಉಲ್ಲಂಘಿಸಿದರೆ 25 ಸಾವಿರ ರೂ. ವರೆಗೆ ದಂಡ ಕನಿಷ್ಟ 10 ಸಾವಿರ ರೂ., ಗರಿಷ್ಟ 25 ಸಾವಿರ ರೂ.
  • ದಂಡ ವಿಧಿಸಿದ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ

ಕನ್ನಡಿಗರಿಗೆ ಅರ್ಹತೆ ಹೇಗೆ?

  • ಕರ್ನಾಟಕದಲ್ಲಿ ಹುಟ್ಟಿರಬೇಕು
  •  ಕರ್ನಾಟಕದಲ್ಲಿ 15 ವರ್ಷ ವಾಸವಿರಬೇಕು
  •  ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು
  •  ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 17 July 24