ಬೆಂಗಳೂರು: ಮಳೆಗಾಲದಲ್ಲಿಯೂ ನೀರಿಗಾಗಿ ನಿಲ್ಲದ ಪರದಾಟ, ಜಲಮಂಡಳಿ ವಿರುದ್ಧ ಜನರ ಆಕ್ರೋಶ
ಬೇಸಿಗೆ ಆರಂಭಕ್ಕೂ ಮುನ್ನ ನೀರಿಗಾಗಿ ಜನರು ಪರಿತಪಿಸಿದ್ದರು. ಸದ್ಯ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಜೀವಕಳೆ ಬಂದಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗಾಲ ಆರಂಭವಾದರೂ ಕೂಡ ನಿವಾಸಿಗಳಿಗೆ ಕಾವೇರಿ ನೀರು ಪೂರೈಕೆ ಆಗದೇ ಜೀವ ಜಲಕ್ಕಾಗಿ ಪರದಾಡುವಂತಾಗಿದೆ.
ಬೆಂಗಳೂರು, ಜುಲೈ 18: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮವಾದ ಮಳೆ ಆಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಒಣಗಿದ್ದ ಜಲಾಶಯಗಳಿಗೆ ನೀರು ತುಂಬಿಕೊಂಡು ಜೀವ ಕಳೆ ಬಂದಿದೆ. ಅತ್ತ ಕೆಆರ್‌ಎಸ್ ಡ್ಯಾಂ ಕೂಡ ಭರ್ತಿಯಾಗುತ್ತಿದೆ. ಆದರೂ ಕೂಡ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜ್ಞಾನಜ್ಯೋತಿ ನಗರದ 6 ನೇ ಮುಖ್ಯ ರಸ್ತೆ ನಿವಾಸಿಗಳಿಗೆ ಮಾತ್ರ ಕಾವೇರಿ ನೀರು ಪೂರೈಕೆ ಆಗುತ್ತಿಲ್ಲ. ನೀರಿನ ಪೂರೈಕೆ ಆಗದೇ ಇಲ್ಲಿನ ನಿವಾಸಿಗಳು ಜೀವಜಲಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಸುಮಾರು ಬಾರಿ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಟ್ಯಾಂಕರ್ ಮೋರೆ ಹೋಗುವಂತಾಗಿದ್ದು, ಕಾವೇರಿ ನೀರು ಪೂರೈಕೆ ಮಾಡಲು ಮೀನಾಮೇಷ ಏಣಿಸುತ್ತಿರೋ ಜಲಮಂಡಳಿ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ ಹೊರಹಾಕುತ್ತಿದ್ದಾರೆ.
ಇಲ್ಲಿ ರಾಜ್ಯದ ನಾನಾ ಭಾಗಗಳಿಂದ ಜನರು ಬಂದು ವಾಸಿಸುತ್ತಿದ್ದಾರೆ. ಬಹುತೇಕ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸೋದೇ ಕಷ್ಟ. ಇಂತಹದ್ದರಲ್ಲಿ ಟ್ಯಾಂಕರ್ ನೀರಿಗೆ ದುಡ್ಡು ಕೊಡಬೇಕು ಅಂದರೆ ಕಷ್ಟ ಆಗುತ್ತದೆ. ಜನವರಿ ತಿಂಗಳಿಂದ ಇಲ್ಲಿನ ನಿವಾಸಿಗಳಿಗೆ ಅಭಾವ ಎದುರಾಗಿದೆ. ಬೇಸಿಗೆ ಸಂದರ್ಭದಲ್ಲಿ ನಗರದಲ್ಲೇ ನೀರಿನ ವ್ಯತ್ಯಯ ಇತ್ತು. ಆದರೆ ಈಗ ಮಳೆಗಾಲ ಆರಂಭವಾದರೂ ಇದೇ ಪರಿಸ್ಥಿತಿ ಇದೆ. ಸುಮಾರು ಬಾರಿ ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ಕೂಡ ತರಲಾಗಿದೆ. ಆದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಲ್ಲದೇ, ವಾರಕ್ಕೊಮ್ಮೆ ಎರಡು ದಿನಕೊಮ್ಮೆ ಕೆಲವೊಮ್ಮೆ ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತೆ. ಅದು ಕೂಡ ಸರಿಯಾಗಿ ಬರಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆ ಆಗುತ್ತಿದ್ದು, ಒಂದು ವೇಳೆ ಸರಿಯಾಗಿ ನೀರು ಪೂರೈಕೆ ಮಾಡದೇ ಹೋದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಇಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಡೆಂಗ್ಯೂ ಕೇಸ್ ಹೆಚ್ಚಳ: ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಸೂಚನೆ
ಒಟ್ಟಿನಲ್ಲಿ ಜ್ಞಾನ ಜ್ಯೋತಿನಗರದ 6 ನೇ ಮುಖ್ಯ ರಸ್ತೆ ನಿವಾಸಿಗಳು ಜೀವ ಜಲಕ್ಕಾಗಿ ಪರಿತಪಿಸುವಂತಾಗಿದ್ದು, ಇನ್ನಾದರು ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾವೇರಿ ನೀರು ಪೂರೈಕೆ ಮಾಡುತ್ತಾರೊ ಇಲ್ವಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ