ಕನ್ನಡಿಗರ ಸಹನೆಯನ್ನು ಮತ್ತೆ ಮತ್ತೆ ಕೆಣಕುವ ಪಿತೂರಿ ಪಾಂಡಿತ್ಯವನ್ನು ಕೇಂದ್ರ ತಕ್ಷಣ ನಿಲ್ಲಿಸಬೇಕು: ಸಿದ್ದು ಎಚ್ಚರಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2022 | 7:42 PM

ಕಾನ್​ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್​ಎಸ್​ಸಿ) ಮತ್ತೊಮ್ಮೆ ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿ ಅನುಸರಿಸಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಕನ್ನಡಿಗರ ಸಹನೆಯನ್ನು ಮತ್ತೆ ಮತ್ತೆ ಕೆಣಕುವ ಪಿತೂರಿ ಪಾಂಡಿತ್ಯವನ್ನು ಕೇಂದ್ರ ತಕ್ಷಣ ನಿಲ್ಲಿಸಬೇಕು: ಸಿದ್ದು ಎಚ್ಚರಿಕೆ
ಸಿದ್ದರಾಮಯ್ಯ
Follow us on

ಬೆಂಗಳೂರು: ಪೇದೆ ಆಯ್ಕೆಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್‍ಎಸ್‍ಸಿ) ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಈ ಕುರಿತು ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ನಾನಾ ಭದ್ರತಾ ಪಡೆಗಳ ಸಿಬ್ಬಂದಿ ಆಯ್ಕೆಗೆ ಜನವರಿಯಲ್ಲಿ ನಡೆಸಲಿರುವ ಪರೀಕ್ಷೆಗಳಿಂದ ಕನ್ನಡವನ್ನು ಕೈಬಿಟ್ಟು ನಾಡಿನ ಯುವ ಸಮೂಹದ ಸಹನೆಯನ್ನು ಕೇಂದ್ರ ಸರ್ಕಾರ ತೀವ್ರವಾಗಿ ಕೆಣಕುತ್ತಿದ್ದು ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಂಡಿಸಿದ್ದಾರೆ.

ಕೇದ್ರ ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸತ್ತಿನ ಸಮಿತಿಯು ಇತ್ತೀಚಿಗೆ ರಾಷ್ಟ್ರಪತಿಗಳಿಗೆ ನೀಡಿದ 11ನೇ ವರದಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ. ಕಲಿಕೆಯಲ್ಲಿ ಮಾತೃಭಾಷೆಗಳಿಗೆ ಆದ್ಯತೆ ನೀಡಿದ ಬಳಿಕ ಉದ್ಯೋಗದ ಪ್ರಶ್ನೆ ಬಂದಾಗ ಮಾತ್ರ ಹಿಂದಿಯಲ್ಲೇ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುವುದು ಕಪಟತನವಾಗುತ್ತದೆ. ರಾಷ್ಟçಕವಿ ಕುವೆಂಪು ಅವರು ಇದನ್ನೇ ತ್ರಿಭಾಷಾ ಶೂಲ ಎಂದು ಕರೆದಿದ್ದಾರೆ.

ಕೋಟಿ ಕಂಠಗಳಲ್ಲಿ ಕನ್ನಡ ಗೀತೆ ಹಾಡಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಪ್ರತಿಯೊಬ್ಬ ಕನ್ನಡಿಗನಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು” ಎಂದು ನೆನ್ನೆ ದಿನ ಭಾಷಣ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಮಾತ್ರ ಕನ್ನಡಿಗರ ಪಾಲಿನ ಉದ್ಯೋಗವನ್ನು ಕಿತ್ತುಕೊಂಡು ಸಾಮಾಜಿಕವಾಗಿ ಅಭದ್ರತೆ ಸೃಷ್ಟಿಸಿ, ಆರ್ಥಿಕ ಸ್ವಾವಲಂಬನೆಯ ಬೇರುಗಳನ್ನು ಕತ್ತರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಡಬ್ಬಲ್ ಎಂಜಿನ್ ಸರ್ಕಾರಗಳ ಈ ತಂತ್ರ-ಕುತಂತ್ರ ಕೇಂದ್ರ ಮತ್ತು ರಾಜ್ಯಗಳ ನಡುವೆ ಇದ್ದ ಸಹೋದರತ್ವವನ್ನು ಹಂತ ಹಂತವಾಗಿ ಕೊಲ್ಲುತ್ತಾ ಬರುತ್ತಿದೆ. ಕೇಂದ್ರ ರಾಜ್ಯಗಳ ನಡುವಿನ ಸೌಹಾರ್ಧ ಪರಂಪರೆಯ ಮೇಲೆ ತನ್ನ ವಿಕೃತ ದಾಳಿಯನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಮುಂದುವರೆಸಿರುವ ಕೇಂದ್ರ, ಕನ್ನಡ ನಾಡಿನ ಯುವಕ/ಯುವತಿಯರ ಪಾಲಿನ ಉದ್ಯೋಗವನ್ನು ಸಾರಾಸಗಟಾಗಿ ಕಿತ್ತುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂಬತ್ತು ವರ್ಷಗಳಿಂದ ಯಾವ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದ ಕೇಂದ್ರ ಸಹಜವಾಗಿ ಬಂದಿರುವ ಕನ್ನಡ ನಾಡಿನ ಮತ್ತು ರಾಜ್ಯಗಳ ಪಾಲಿನ ಉದ್ಯೋಗವನ್ನು ಕುತಂತ್ರದ ಮೂಲಕ ಕಿತ್ತುಕೊಳ್ಳುತ್ತಿದೆ. ಲಾಠಿ ಹಿಡಿದವನೇ ದೊಣ್ಣೆ ನಾಯಕ ಎನ್ನುವ ನಾಣ್ಣುಡಿಯಂತೆ ಕೇಂದ್ರ ಸರ್ಕಾರ ತನ್ನ ಅಧಿಕಾರದ ದರ್ಪವನ್ನು ರಾಜ್ಯಗಳ ಪಾಲಿನ ಪರಮಾಧಿಕಾರವನ್ನು ಕಿತ್ತುಕೊಳ್ಳಲು ಬಳಸುತ್ತಿದೆ. ಒಂದು ಕಡೆ ಕೇಂದ್ರದ ಉದ್ಯೋಗಗಳು ಕನ್ನಡಿಗರು ಮತ್ತು ದಕ್ಷಿಣ ಭಾರತದ ರಾಜ್ಯಗಳ ಯುವ ಸಮೂಹದ ಕೈಗೆಟುಕದಂತೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ಕಡೆ ಇಡಿ ದೇಶದ ಪೊಲೀಸ್ ವ್ಯವಸ್ಥೆಯನ್ನು ಕೇಂದ್ರದ ಹಿಡಿತಕ್ಕೆ ತೆಗೆದುಕೊಳ್ಳುವ ಮೊದಲ ಹಂತವಾಗಿ ಎಲ್ಲಾ ರಾಜ್ಯಗಳ ಪೊಲೀಸ್ ಸಿಬ್ಬಂದಿ ಕೇಂದ್ರ ಸೂಚಿಸುವ ಸಮವಸ್ತ್ರವನ್ನೇ ಧರಿಸಬೇಕು ಎನ್ನುವ ಮಾತುಗಳನ್ನು ಆಡತೊಡಗಿದೆ. ಬ್ಯಾಂಕ್ ಹುದ್ದೆಗಳ ಪ್ರವೇಶ ಪರೀಕ್ಷೆಯಲ್ಲಿ ಕನ್ನಡದ ಕೊರಳು ಹಿಚುಕುತ್ತಿದ್ದ ಕೇಂದ್ರದ ನೀತಿ ವಿರುದ್ಧ ಕನ್ನಡ ನಾಡು ನಿರಂತರವಾಗಿ ಧ್ವನಿ ಎತ್ತಿ ತನ್ನ ಹಕ್ಕನ್ನು ಕಾಪಾಡಿಕೊಳ್ಳುತ್ತಿದೆ ಎನ್ನುವ ಹೊತ್ತಲ್ಲೇ ಇಂತಹ ಹತ್ತಾರು ದಾಳಿಗಳನ್ನು ನಾನಾ ರೀತಿಗಳಲ್ಲಿ ಕೇಂದ್ರ ಮುಂದುವರೆಸಿದೆ. ಬಿಎಸ್‌ಎಫ್, ಕೇಂದ್ರೀಯ ಕೈಗಾರಿಕಾ ಪಡೆ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್ ಸೇರಿದಂತೆ ನಾನಾ ಕೇಂದ್ರ ಪಡೆಗಳಿಗೆ ಜನವರಿಯಲ್ಲಿ ನಡೆಯುತ್ತಿರುವ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವ ತೀರ್ಮಾನವನ್ನು ಕೇಂದ್ರ ತಕ್ಷಣ ಹಿಂದಕ್ಕೆ ಪಡೆದುಕೊಳ್ಳಬೇಕು. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಭದ್ರತಾ ಪಡೆಗಳ, ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಆಗಿರಬಹುದು, ಕೇಂದ್ರ ಭದ್ರತಾ ಸಿಬ್ಬಂದಿ ಆಯ್ಕೆ ಪರೀಕ್ಷೆಯಲ್ಲಿ ತನ್ನ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕು ಕನ್ನಡಿಗರ ಪರಮಾಧಿಕಾರ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾಲನ್ನು ನೀಡುವ ಮೂಲಕ ಉತ್ತರ ಭಾರತದ ಅಭಿವೃದ್ಧಿಗೆ ಹೆಚ್ಚಿನ ಪಾಲು ಕೊಡುತ್ತಿರುವುದು ಕರ್ನಾಟಕದ ಜನತೆ. ಈ ಜನತೆಯ ಪಾಲಿನ ಉದ್ಯೋಗವನ್ನು ಕಿತ್ತುಕೊಳ್ಳುವುದು ಉಂಡ ಮನೆಗೆ ದ್ರೋಹ ಬಗೆಯುವ ಕೃತ್ಯವಾಗಿದೆ. ಕನ್ನಡಿಗರ ಸಹನೆಯನ್ನು ಮತ್ತೆ ಮತ್ತೆ ಕೆಣಕುವ ಪಿತೂರಿ ಪಾಂಡಿತ್ಯವನ್ನು ಕೇಂದ್ರ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.