ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಮಾಡುವ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಅದಕ್ಕೂ ಮುನ್ನ ಗೋಹತ್ಯೆ ಮಾಡುತ್ತಿರುವವರು ಯಾರು? ವಿದೇಶಕ್ಕೆ ರಫ್ತು ಮಾಡುತ್ತಿರುವವರು ಯಾರೆಂದು ಹೇಳಲಿ ಎಂದು ಸಿ.ಟಿ.ರವಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇರ ಪ್ರಶ್ನೆ ಹಾಕಿದ್ದಾರೆ.
ಸಿ.ಟಿ.ರವಿ ಸುಮ್ಮನೆ ಬುರುಡೆ ಹೊಡೆಯುವುದು ಬಿಡಲಿ. ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಮಾತನಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗೋ ಹತ್ಯೆ ನಿಷೇಧ ಮಾಡುವ ಮೊದಲು ಗೋ ಹತ್ಯೆ ಮಾಡಿ ವ್ಯಾಪಾರ ಮಾಡುತ್ತಿರುವವರು ಯಾರು ಅಂತ ಹೇಳಲಿ. ವಿದೇಶಕ್ಕೆ ಗೋ ರಫ್ತು ಮಾಡುತ್ತಿರುವವರು ಯಾರು ಅಂತಾ ಸಿಟಿ ರವಿ ಹೇಳಲಿ ಎಂದು ಹೇಳಿದರು.
‘ಬಿಜೆಪಿಯವರು ಇನ್ನೂ ಮನುಸ್ಮೃತಿಯಲ್ಲಿಯೇ ಇದ್ದಾರೆ’
ಲವ್ ಜಿಹಾದ್ ತಡೆಗೆ ಮತಾಂತರ ನಿಷೇಧ ಕಾನೂನು ವಿಚಾರವಾಗಿಮತಾಂತರ ನಿಷೇಧ ಕಾನೂನು ಜಾರಿಗೆ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ಬಿಜೆಪಿಯವರು ಇನ್ನೂ ಮನುಸ್ಮೃತಿಯಲ್ಲಿಯೇ ಇದ್ದಾರೆ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ನಾವು ಯಾರನ್ನ ಮದುವೆ ಆಗಬೇಕೆಂದು ಹೇಳಲು ನೀವ್ಯಾರು? ನೀವು ಹೇಳಿದವರನ್ನು ಮದುವೆ ಮಾಡಿಕೊಳ್ಳಲು ಸಾಧ್ಯವೇ? ಮದುವೆ ಆಗೋದು ಅವರವರ ವೈಯಕ್ತಿಕ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು. ಯಾರೂ ಯಾರ ಮೇಲೂ ಬಲವಂತ ಮಾಡೋಕೆ ಆಗಲ್ಲ ಎಂದು ಸಹ ಹೇಳಿದರು.
‘RSS ಈಸ್ ಮೈ ಫಸ್ಟ್ ಪೊಲಿಟಿಕಲ್ ಅಪೋನೆಂಟ್’
RSS ಈಸ್ ಮೈ ಫಸ್ಟ್ ಪೊಲಿಟಿಕಲ್ ಅಪೋನೆಂಟ್. ಅವರ ನನ್ನ ಮೊದಲ ರಾಜಕೀಯ ಪ್ರತಿಸ್ಪರ್ಧಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಾನು RSSನ ವಿರೋಧಿ ಎಂದ ಸಿದ್ದರಾಮಯ್ಯ RSS ಬಗ್ಗೆ ನನಗೆ ಗೊತ್ತಿಲ್ಲವೆಂದು ಹೇಳುವ ಸಿ.ಟಿ.ರವಿ ಏನು ಕೇಶವ ಹೆಡಗೆವಾರ್ ಜೊತೆ ಇದ್ನಾ? ಸಿ.ಟಿ.ರವಿ RSS ಸಂಸ್ಥಾಪಕ ಸದಸ್ಯನಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕೇಶವ ಹೆಡಗೆವಾರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಗೋಲ್ವಾಲ್ಕರ್ ಆರೆಸ್ಸೆಸ್ನ 2ನೇ ಸರಸಂಘಚಾಲಕರಾಗಿದ್ದರು. ಗೋಲ್ವಾಲ್ಕರ್ ಎಲ್ಲಿದ್ದರು, ಕಾಂಗ್ರೆಸ್ನಲ್ಲಿ ಇದ್ದರು ತಾನೇ? ಜನಸಂಘ ಇದ್ದಾಗ ಸಿ.ಟಿ.ರವಿ ಎಲ್ಲಿದ್ದ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
‘ಬಸನಗೌಡ ತುರುವಿಹಾಳ್ ಕಾಂಗ್ರೆಸ್‌ನಿಂದ ಸ್ಪರ್ಧಿಸ್ತಾರೆ’
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಬಸನಗೌಡ ತುರುವಿಹಾಳ್ ಕಾಂಗ್ರೆಸ್‌ನಿಂದ ಸ್ಪರ್ಧಿಸ್ತಾರೆ. ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನ.23ರಂದು ಸಭೆ ನಡೆಯಲಿದೆ. ಸಭೆಯಲ್ಲಿ ಬಸನಗೌಡ ತುರುವಿಹಾಳ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ಬಸನಗೌಡ ತುರುವಿಹಾಳ್ ಈ ಬಾರಿ ಸ್ಪರ್ಧೆ ಮಾಡುತ್ತಾರೆ. ಮಸ್ಕಿಯಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ 2 ತಂಡ ರಚನೆ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿರಾ ಕ್ಷೇತ್ರದಲ್ಲಿ ನಾವು ಹಣದ ಕೊರತೆಯಿಂದ ಸೋತೆವು. ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಹಂಚಿಕೆ ಮಾಡಿದ್ದಾರೆ ಎಂದು ಸಹ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.