ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಹೊರಟಿರುವ ಗೋಹತ್ಯೆ ನಿಷೇಧ ಕಾಯ್ದೆ ಕಠೋರ, ಅವೈಜ್ಞಾನಿಕ ಮತ್ತು ರೈತ ವಿರೋಧಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕಾಯ್ದೆಗೆ ಮತೀಯ ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದೆಯೇ ಹೊರತು ಗೋವಿನ ಬಗ್ಗೆ ಭಕ್ತಿ, ಕಾಳಜಿ ಇಲ್ಲ ಎಂದು ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಜಾನುವಾರುಗಳ ಬಗ್ಗೆ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇದ್ದರೆ ಜಾನುವಾರು ಸಂಬಂಧಿ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನ ನಡೆಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನಂತರ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೂಪಿಸಲಿ. ಗೋವಾ, ಕೇರಳ ಮತ್ತು ಈಶಾನ್ಯ ರಾಜ್ಯ ಸೇರಿದಂತೆ ಇಡೀ ದೇಶಕ್ಕೆ ಅನ್ವಯವಾಗುವ ಒಂದು ಕಾನೂನು ಜಾರಿಗೆ ತರಲಿ. ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಿ ಎಂದು ಆಗ್ರಹಿಸಿದ್ದಾರೆ.
ಆಡಳಿತದ ವೈಫಲ್ಯ ಮುಚ್ಚಿ ಹಾಕಲು ಇದೊಂದು ಮಾರ್ಗ
ಗೋಹತ್ಯೆ ನಿಷೇಧ 1964 ರಿಂದಲೇ ಇದೆ. ಆದರೆ, ಈಗ ರಾಜ್ಯ ಸರ್ಕಾರ ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಹೊಸದಾಗಿ ಒಂದಷ್ಟು ಸೇರಿಸಿ ಕಾಯ್ದೆ ತರಲು ಹೊರಟಿದೆ. ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಮಸೂದೆ ಮಂಡಿಸಿ ಅಂಗೀಕಾರ ಪಡೆಯುವ ಪ್ರಯತ್ನ ಮಾಡಿದೆ. ಇದು ಭಾರತೀಯ ಜನತಾ ಪಕ್ಷದ ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಗುಡುಗಿದ್ದಾರೆ.
ಗೋಹತ್ಯೆ ನಿಷೇಧಿಸುವ ಮೊದಲು ಅನುತ್ಪಾದಕ ಜಾನುವಾರುಗಳನ್ನು ಸರ್ಕಾರವೇ ಖರೀದಿಸಬೇಕು. ಅಥವಾ ಸಾಕಣಿಕೆಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕು. ಇದಕ್ಕೆ ಸಿದ್ಧವಿದ್ದರೆ ಮುಂದಿನ ವಾರವೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಿ ನಾವು ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ, ಕಳೆದ 20 ವರ್ಷಗಳಲ್ಲಿ ಕನಿಷ್ಠ 15 ವರ್ಷ ರಾಜ್ಯ ಬರಗಾಲ ಎದುರಿಸಿದೆ. ಜಾನುವಾರುಗಳಿಗೆ ಮೇವು ಒದಗಿಸಲು ಅಸಾಧ್ಯ ಎಂಬ ಪರಿಸ್ಥಿತಿ ಎದುರಾದಾಗ ಸಹಜವಾಗಿಯೇ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಆದರೆ, ಹೊಸ ಕಾಯ್ದೆಯಿಂದ ಇಂತಹ ಸನ್ನಿವೇಶದಲ್ಲಿ ಸಂಘರ್ಷ ಉಂಟಾಗುತ್ತದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು159 ಗೋಶಾಲೆಗಳು ಇವೆ. ಅಲ್ಲಿರುವ ಹಸು, ಹೋರಿಗಳಿಗೇ ಸರ್ಕಾರ ಸರಿಯಾಗಿ ಮೇವು ಒದಗಿಸುತ್ತಿಲ್ಲ. ಇನ್ನು ರೈತರು ತಮ್ಮ ಬಳಿಯಿರುವ ಹೋರಿ, ವಯಸ್ಸಾದ ಹಸುಗಳನ್ನು ಕೊಂಡುಹೋಗಿ ಗೋಶಾಲೆಗೆ ಬಿಟ್ಟರೆ ಅವುಗಳಿಗೆ ಮೇವು ಹಾಕೋರು ಯಾರು ಎನ್ನುವ ಪರಿಕಲ್ಪನೆ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ.
ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ತುರ್ತು ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ