ಬೆಂಗಳೂರು: ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal Virupakshappa) ಪುತ್ರನ ಲಂಚಾವತಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ವಿರೂಪಕಾಕ್ಷಪ್ಪಗೆ ದಿನಗಳು ಉರುಳಿದಂತೆ ಬಂಧನ ಭೀತಿ ಎದರಾಗಿದೆ. ಲೋಕಾ ಬಂಧನದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಮಾಡಾಳ್, ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ. ವಕೀಲರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಂದು(ಮಾ.07) ಮಾಡಾಳ್ ನಿರೀಕ್ಷಣಾ ಅರ್ಜಿ ವಿಚಾರಣೆ ನಡೆಯಲಿದೆ.
40ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದು ಹಾಗೂ ಮನೆಯಲ್ಲಿ 8 ಕೋಟಿ ರೂ. ಅಧಿಕ ಹಣ ಸಿಕ್ಕಿದ್ದರ ಕುರಿತು ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಶಾಸಕನ ಪುತ್ರ ಮಾಡಾಳ್ ಪ್ರಶಾಂತ್ ಈಗಾಗಲೇ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಆದ್ರೆ ಎ1 ಆರೋಪಿ ಶಾಸಕ ವಿರೂಪಾಕ್ಷಪ್ಪ ಮಾತ್ರ ಇನ್ನೂ ಭೂಗತರಾಗಿದ್ದಾರೆ. ಮಾಡಾಳ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಎಲ್ಲಿದ್ದಾರೆ ಎನ್ನುವ ಸುಳಿವೇ ಸಿಗುತ್ತಿಲ್ಲ. ಶಾಸಕ ನಾಪತ್ತೆಯಾಗಿ 6 ದಿನ ಕಳೆದಿದೆ ಆದ್ರೂ ಪೊಲೀಸರ ಕೈಗೆ ಸಿಗುತ್ತಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ರು. ಆದ್ರೆ ಮಾಡಾಳ್ ಮಾತ್ರ ನೋಟಿಸ್‌ಗೆ ಕೇರ್ ಮಾಡುತ್ತಿಲ್ಲ. ವಿಚಾರಣೆಗೂ ಹಾಜರಾಗಿಲ್ಲ.
ಅವರ ಬಂಧನವಾಗದಂತೆ ತಡೆಯುತ್ತಿರುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಮಾಡಾಳ್ ನ್ಯಾಯಾಲಯದ ಮೂಲಕ ರಿಲೀಫ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ವಿಚಾರಣೆ ಮುಂದೂಡಿಕೆಯಾಗಿದ್ದು ಏನಾಗುತ್ತೆ ಎನ್ನುವ ಕುತೂಹಲ ಮೂಡಿದೆ.
ಮತ್ತೊಂದು ಕಡೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಮಾಡಾಳ್ ಪುತ್ರ ಪ್ರಶಾಂತ್ನನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಮುಂದಾಗಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು ಅರ್ಜಿಯ ವಿಚಾರಣೆ ನಡೆಯಲಿದೆ. ಪ್ರಶಾಂತ್ ಸೇರಿ ಒಟ್ಟು ಐವರನ್ನು 7 ದಿನಗಳ ಕಾಲ ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಮಾಡಾಳ್ ನಿವಾಸದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಸ್ವಕ್ಷೇತ್ರ ದಾವಣಗೆರೆಯ ಚನ್ನಗಿರಿಯ ನಿವಾಸದಲ್ಲೂ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಶಾಸಕ ಮಾಡಾಳ್ ಕುಟುಂಬದ ಜನ್ಮ ಜಾಲಾಡಿತ್ತು. ಇದೇ 3ರಂದು ಸತತ 10 ಗಂಟೆಗಳ ಕಾಲ ಶೋಧ ನಡೆಸಿತ್ತು. ಇಪ್ಪತ್ತು ಜನ ಲೋಕಾಯುಕ್ತ ಅಧಿಕಾರಿಗಳು ಬಿಡುವಿಲ್ಲದೆ ತಿಂಡಿ ಊಟ ಅಲ್ಲಿಯೇ ತರಿಸಿಕೊಂಡು ನಿರಂತರ ಪರಿಶೀಲನೆ ನಡೆಸಿದ್ರು.
ಇದೇ ವೇಳೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ಅರ್ಜಿ ಇತ್ಯರ್ಥವಾಗುವವರೆಗೂ ಲೋಕಾಯುಕ್ತ ಪೊಲೀಸರ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.
ದೂರುದಾರರಿಗೆ ಯಾವುದೇ ಅನುಕೂಲ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಮತ್ತು ಲಂಚ ಸ್ವೀಕರಿಸಿದ ಬಗ್ಗೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಪ್ರಕರಣದ ಎರಡನೇ ಆರೋಪಿಯಾದ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪುತ್ರ ಪ್ರಶಾಂತ್ ಮಾಡಾಳು ಅವರಿಂದ ಲಂಚದ ಹಣ ಜಪ್ತಿ ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿರೂಪಾಕ್ಷಪ್ಪ ಆಕ್ಷೇಪಿಸಿದ್ದಾರೆ.