ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನದ ಭೀತಿ; ಚನ್ನಗಿರಿ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ
ಚುನಾವಣೆ ಸಮಯದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ದಾಳಿ ನಡೆದಿರುವುದು ಬಿಜೆಪಿ ಪಕ್ಷಕ್ಕೆ ತೀವ್ರ ಹಿನ್ನಡೆ, ಮುಜುಗರ ಉಂಟುಮಾಡಿದೆ. ಹೀಗಾಗಿ ಚನ್ನಗಿರಿ ಕ್ಷೇತ್ರಕ್ಕೆ ಓರ್ವ ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಆರ್ಎಸ್ಎಸ್ನಿಂದಲೂ ಕ್ಲೀನ್ ಇಮೇಜ್ ವ್ಯಕ್ತಿಗೆ ಹುಡುಕಾಟ ನಡೆಯುತ್ತಿದೆ.

ಶಿವಮೊಗ್ಗ: ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ದಾಳಿ ನಡೆಸಿದ ನಂತರ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರಿಗೆ ಬಂಧನ ಭೀತಿ ಎದುರಾದ ಹಿನ್ನಲೆ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಈ ನಡುವೆ ಅವರು ಸ್ಪರ್ಧಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ (Channagiri BJP Ticket) ಯಾರಿಗೆ ಎಂಬ ಪ್ರಶ್ನೆ ಹಾಗೂ ಕುತೂಹಲ ಮೂಡಿಸಿದೆ. ಚುನಾವಣೆ ಸಮಯದಲ್ಲಿ ವಿರೂಪಾಕ್ಷಪ್ಪ ಮನೆ ಮೇಲೆ ದಾಳಿ ನಡೆದಿರುವುದು ಬಿಜೆಪಿ ಪಕ್ಷಕ್ಕೆ ತೀವ್ರ ಹಿನ್ನಡೆ, ಮುಜುಗರ ಉಂಟುಮಾಡಿದೆ. ಹೀಗಾಗಿ ಚನ್ನಗಿರಿ ಕ್ಷೇತ್ರಕ್ಕೆ ಓರ್ವ ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಆರ್ಎಸ್ಎಸ್ನಿಂದಲೂ ಕ್ಲೀನ್ ಇಮೇಜ್ ವ್ಯಕ್ತಿಗೆ ಹುಡುಕಾಟ ನಡೆಯುತ್ತಿದೆ.
ಈಗಾಗಲೇ ಚನ್ನಗಿರಿ ಕ್ಷೇತ್ರದ ಟಿಕೆಟ್ಗಾಗಿ ಆಕಾಂಕ್ಷಿಗಳ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ಅದಾಗ್ಯೂ, ಶಿವಮೊಗ್ಗದ ವೈದ್ಯ ಡಾ. ಧನಂಜಯ ಸರ್ಜಿ ಅವರನ್ನು ಕಣಕ್ಕಿಳಿಸಲು ಒತ್ತಾಯಿಸಲಾಗುತ್ತಿದೆ. ಶಿವಮೊಗ್ಗ ಬಿಜೆಪಿ ಮುಖಂಡರಾಗಿರುವ ಇವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ಗಾಗಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆದರೆ ಮೂಲತಃ ಚನ್ನಗಿರಿಯವರಾಗಿರುವ ಧನಂಜಯ ಅವರಿಗೆ ಚನ್ನಗಿರಿ ಬಿಜೆಪಿ ಮುಖಂಡರು ಮತ್ತು ಸ್ಥಳೀಯರು ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಉದ್ಯಮಿಯ ಸ್ಮಾರ್ಟ್ವಾಚ್ನಲ್ಲಿ ಸರೆಯಾಯ್ತು ಮಾಡಾಳ್ ಪ್ರಶಾಂತ್ ಲಂಚ ಪ್ರಕರಣ; ಬಿಜೆಪಿ ಶಾಸಕನ ಮಗ ಬಲೆಗೆ ಬಿದ್ದದ್ದು ಹೀಗೆ
ಸದ್ಯ ಆರ್ಎಸ್ಎಸ್ ಮತ್ತು ಬಿಜೆಪಿ ಮುಖಂಡರು ಧನಂಜಯ ಸರ್ಜಿ ಪರ ಒಲವು ಹೊಂದಿದ್ದಾರೆ. ಆದರೆ ಚನ್ನಗಿರಿ ಕ್ಷೇತ್ರದ ಟಿಕೆಟ್ಗಾಗಿ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ, ಸ್ಥಳೀಯ ಮುಖಂಡ ತುಮಕೊಸ್ ಮಾಜಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಚ್.ಎಸ್. ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಇಬ್ಬರ ನಡುವೆ ಶಿವಮೊಗ್ಗದ ಧನಂಜಯ ಸರ್ಜಿ ಹೆಸರು ಕೇಳಿಬಂದಿದೆ. ಅಂತಿಮವಾಗಿ ಚನ್ನಗಿರಿ ಕ್ಷೇತ್ರದ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 pm, Mon, 6 March 23




