ಕಾಂಗ್ರೆಸ್ನವರ ಗೃಹಲಕ್ಷ್ಮಿ ಯೋಜನೆ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಜಗಳ ಹಚ್ಚುವ ಯೋಜನೆ: ಇಬ್ರಾಹಿಂ ವ್ಯಂಗ್ಯ
ಕಾಂಗ್ರೆಸ್ನವರ ಗೃಹಲಕ್ಷ್ಮಿ ಯೋಜನೆ ಇದು ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಜಗಳ ಹಚ್ಚುವ ಯೋಜನೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ: ಕಾಂಗ್ರೆಸ್ನವರ ಗೃಹಲಕ್ಷ್ಮಿ ಯೋಜನೆ ಇದು ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಜಗಳ ಹಚ್ಚುವ ಯೋಜನೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಕ್ಷೇತ್ರ ಪಾದಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿ, ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ ಉತ್ತಮ ಆಗಬೇಕೆಂದರೆ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹನುಮಂತ ಮಾವಿನಮರದ ಹಾರಿಸಿ ಕಳಿಸಿದರೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗೊಬ್ಬ ಒಳ್ಳೆಯ ನಾಯಕನ ಕೊಟ್ಟಂತೆ. ಇವತ್ತು ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದೀರಿ. ನಮ್ಮ ಚರ್ಮ ತೆಗೆದು ನಿಮ್ಮ ಪಾದುಕೆ ಮಾಡಿದರು ನಿಮ್ಮ ಋಣ ತೀರಿಸೋಕೆ ಆಗೋದಿಲ್ಲ ಎಂದು ಹೇಳಿದರು.
ಬಾದಾಮಿಯಲ್ಲಿ ಸಮಸ್ಯೆ ಬಹಳ ಇವೆ. ಅದಕ್ಕೆ ಸಿದ್ದರಾಮಣ್ಣ ಯಾಕೆ ಇರಲಿಕ್ಕೆ ಬೇಡ ಎನ್ನುತ್ತಾರೆ ಅಂತ ಗೊತ್ತಾಗಿದೆ. ಸಿದ್ದರಾಮಯ್ಯ ಹೆಲಿಕಾಪ್ಟರ್ಲ್ಲಿ ಬರುವುದು, ಶೆಟ್ಟಿ ಮನ್ಯಾಗ ಇರೋದು, ಹೋಗೂದು ಇಷ್ಟೇ ಅವರು ಮಾಡಿದ್ದು ಎಂದು ಹರಿಹಾಯ್ದರು.
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಗಂಡಸ್ತನವಿಲ್ಲ ಟೀಕೆ: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿಟಿ ರವಿ ತಿರುಗೇಟು
ಸಿದ್ದುಗೆ ನಿದ್ದೆ ಚಿಂತೆಯಾದ್ರೆ, ಕುಮಾರಣ್ಣನಿಗೆ ರೈತರ ಚಿಂತೆ
ಮಾಡಾಳ್ ಮಗನತ್ತರ 8 ಕೋಟಿ ಇದೆ. ಇನ್ನು ಶಾಸಕನ ಮನೆಯಲ್ಲಿ ಎಷ್ಟಿರಬೇಕು. ದೇವೇಗೌಡರಿಗೆ ನಾಲ್ಕು ಪಂಚೆ, ಧೋತರ ಬಿಟ್ಟರೆ ಏನು ಇಲ್ಲ. ಸಿದ್ದುಗೆ ನಿದ್ದೆ ಚಿಂತೆಯಾದ್ರೆ, ಕುಮಾರಣ್ಣನಿಗೆ ರೈತರ ಚಿಂತೆ ಇದೆ. ಹನಮಂತ ಮಾವಿನಮರದ ಗೆಲ್ಲಿಸಿ ಅವರು ಬರೀ ಶಾಸಕರಲ್ಲ. ಮಂತ್ರಿ ಆಗಿ ಬರುತ್ತಾರೆ. ಜನರ ಉದ್ದಾರಕ್ಕಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಬರಬೇಕು. ಈ ಬಾರಿ ಕುಮಾರಸ್ವಾಮಿ ಸಿಎಂ ಆಗೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.
ಶಿಕ್ಷಣ, ಉಚಿತ ಆರೋಗ್ಯ ಇದು ಪಂಚರತ್ನ ಯೋಜನೆ ಉದ್ದೇಶ: ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಶಿಕ್ಷಣ, ಪ್ರತಿ ಗ್ರಾಮದಲ್ಲಿ ಉಚಿತ ಆರೋಗ್ಯ ಇದು ನಮ್ಮ ಪಂಚರತ್ನ ಯೋಜನೆ ಉದ್ದೇಶ. ರೈತರಿಗೆ ಪ್ರತಿ ವರ್ಷ ಎಕರೆಗೆ ಹತ್ತು ಸಾವಿರ, ಎರಡು ಎಕರೆಗೆ 20 ಸಾವಿರ ನೀಡುತ್ತೇವೆ. ಈ ಭಾಗದಲ್ಲಿ ಪುಲಿಕೇಶಿ ಬ್ಯಾಂಕ್ ರೈತರನ್ನು ಲೂಟಿ ಮಾಡುತ್ತಿದೆ ಅಂತ ಹೇಳಿದ್ದಾರೆ. ನಮ್ಮ ಸರಕಾರ ಬಂದು ಒಂದೇ ತಿಂಗಳಲ್ಲಿ ಈ ಬಗ್ಗೆ ತನಿಖೆ ಮಾಡಿಸಿ ಆ ಸೊಸೈಟಿ ಮುಚ್ಚಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾಡಾಳ್ ಹಗರಣ ದಿಕ್ಕುತಪ್ಪಿಸಲು ನನ್ನ ಮೇಲೆ 200 ಕೋಟಿ ರೂ. ಲೂಟಿ ಆರೋಪ: ಸಿದ್ಧರಾಮಯ್ಯ
ಹನುಮಂತ ಮಾವಿನಮರದಗೆ ಆಶೀರ್ವಾದ ಮಾಡಿ
ಮೇ ತಿಂಗಳಲ್ಲಿ ಚನಾವಣೆಯಿದ್ದು, ಹನುಮಂತನನ್ನು ನಿಮ್ಮ ಮನೆ ಮಗನಂತೆ ಆಶೀರ್ವಾದ ಮಾಡಿ. ಮುಂದೆ ನಿಮ್ಮ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯ ಮುಂದಿನ ಯುಗಾದಿಯೊಳಗೆ ಮಾಡಿಕೊಡುತ್ತೇವೆ. ಪ್ರತಿ ಬಡವರ ನೆಮ್ಮದಿ ಬದುಕಿಗೆ ಜೆಡಿಎಸ್ ಯೋಜನೆಗಳು ಆಸರೆಯಾಗಲಿವೆ. ವಿಕಲಚೇತನರು, ವಿಧವೆಯರಿಗೆ ಪ್ರತಿ ತಿಂಗಳು ಎರಡುವರೆ ಸಾವಿರ ನೀಡಲಿದ್ದೇವೆ. ಒಂದು ಸಾರಿ ಅಧಿಕಾರ ಕೊಡಿ. ರಾಜ್ಯವನ್ನು ರಾಮರಾಜ್ಯ ಮಾಡಿ ತೋರಿಸುತ್ತೇವೆ. ಪಂಚರತ್ನ ಕಾರ್ಯಕ್ರಮ ಮೂಲಕ 2.5 ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇವೆ. ಹನುಮಂತ ಮಾವಿನಮರದ ಕೇವಲ ಶಾಸಕರಾಗಿ ಅಷ್ಟೇ ಅಲ್ಲ ಮಂತ್ರಿಗಳಾಗಿ ಕೆಲಸ ಮಾಡುತ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.