ಸಿಎಂ ಕಚೇರಿಯಲ್ಲಿ ಪತ್ತೆಯಾದರೆ ಪೊಲೀಸ್ ಹೆಲ್ಪ್ಲೈನ್ಗೆ ಕರೆ ಮಾಡಿ, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಹೀಗೊಂದು ಪೋಸ್ಟರ್ ಅಭಿಯಾನ
ಸಿಎಂ ಕಚೇರಿಯಲ್ಲಿ ಪತ್ತೆಯಾದರೆ ಪೊಲೀಸ್ ಹೆಲ್ಪ್ಲೈನ್ಗೆ ಕರೆ. ಹೀಗೊಂದು ಪೋಸ್ಟರ್ ಅಭಿಯಾನವನ್ನು ಕಾಂಗ್ರೆಸ್, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಆರಂಭಿಸಿದೆ.
ದಾವಣಗೆರೆ/ಬೆಂಗಳೂರು: ಬಿಜೆಪಿ ಶಾಸಕನ ಪುತ್ರ 40ಲಕ್ಷ ಲಂಚ ಹಾಗೂ ಮನೆಯಲ್ಲಿ 8 ಕೋಟಿ ರೂ. ಅಧಿಕ ಹಣ ಪತ್ತೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಮತ್ತೊಂದೆಡೆ ದಾವಣಗೆರೆ ನಗರ, ಬೆಂಗಳೂರು ಹಾಗೂ ಚನ್ನಗಿರಿ ಕ್ಷೇತ್ರದಲ್ಲಿ ಯೂತ್ ಕಾಂಗ್ರೆಸ್ ಪೋಸ್ಟರ್ ಅಭಿಯಾನ ನಡೆಸುತ್ತಿದ್ದು, ಮಾಡಾಳ್ ಮಿಸ್ಸಿಂಗ್ ಪೋಸ್ಟರ್ ಅಂಟಿಸುತ್ತಿದ್ದಾರೆ.
ಲೋಕಾಯುಕ್ತ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 6ನೇ ದಿನವಾದರೂ ಪತ್ತೆ ಇಲ್ಲ. ಅವರನ್ನು ಹುಡುಕಿಕೊಡಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಅಂಟಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಣೆಯಾದವರ ಪಟ್ಟಿ ಮಾದರಿಯಲ್ಲಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್, ಕೊನೆ ಬಾರಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿಯಲ್ಲಿ. ಪತ್ತೆಯಾದರೆ ಪೊಲೀಸ್ ಹೆಲ್ಪ್ಲೈನ್ಗೆ ಕರೆ ಮಾಡುವಂತೆ ಮನವಿ ಪೋಸ್ಟರ್ನಲ್ಲಿ ಬರೆಯಲಾಗಿದೆ.
ಶಾಸಕನ ಪುತ್ರ ಪ್ರಶಾಂತ್ ಮಾಡಾಳ್ ಪ್ರಶಾಂತ್ ಈಗಾಗಲೇ ಜೈಲಿನಲ್ಲಿದ್ದಾರೆ. ಆದ್ರೆ ಎ1 ಆರೋಪಿ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಮಾತ್ರ ಇನ್ನೂ ಭೂಗತರಾಗಿದ್ದಾರೆ. ಮಾಡಾಳ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಎಲ್ಲಿದ್ದಾರೆ ಎನ್ನುವ ಸುಳಿವೇ ಸಿಗುತ್ತಿಲ್ಲ. ಶಾಸಕ ನಾಪತ್ತೆಯಾಗಿ 6 ದಿನ ಕಳೆದಿದೆ ಆದ್ರೂ ಪೊಲೀಸರ ಕೈಗೆ ಸಿಗುತ್ತಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ರು. ಆದ್ರೆ ಮಾಡಾಳ್ ಮಾತ್ರ ನೋಟಿಸ್‌ಗೆ ಕೇರ್ ಮಾಡುತ್ತಿಲ್ಲ. ವಿಚಾರಣೆಗೂ ಹಾಜರಾಗಿಲ್ಲ.
ಇದನ್ನೇ ಕಾಂಗ್ರೆಸ್ ಚುನಾವಣೆಗೆ ದೊಡ್ಡ ಅಸ್ತ್ರವನ್ನಾಗಿಟ್ಟುಕೊಂಡು ನಾನಾ ರೀತಿಯಲ್ಲಿ ಬಿಜೆಪಿ ವಿರುದ್ಧ ಸಮರ ಸಾರುತ್ತಿದೆ. ಇದರಿಂದ ಆಡಳಿರೂಢ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.