ಮೈಸೂರು: ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ ಎಂದು ಇಂದು ಬೆಳಗ್ಗೆಯಷ್ಟೇ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದರಂತೆ ಅವರ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದೆ! ಸುಮಾರು 50 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಈ ರಾಮ ಮಂದಿರ ನಿರ್ಮಾಣವಾಗುತ್ತಿದೆ. 120 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ 40 X 60 ಅಡಿ ವಿಸ್ತೀರ್ಣದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.
ಗರ್ಭಗುಡಿ, ಪ್ರಾಂಗಣ, ಹೊರಾಂಗಣ ಹೊಂದಿರುವ ಕಟ್ಟಡ ಇದಾಗಿದ್ದು, ಗರ್ಭಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿ/ ಪ್ರಾಂಗಣ ನಿರ್ಮಾಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಮಂದಿರ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಒಂದು ವರ್ಷದಿಂದ ಇಲ್ಲಿ ಕಾಮಗಾರಿ ನಿಂತಿತ್ತು.
ಮೂಲತಃ ಹೆಂಚಿನ ಮನೆಯಲ್ಲಿದ್ದ ಹಳೆಯ ರಾಮಮಂದಿರ
ಈಗಾಗಲೇ ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಬಾರಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದಲ್ಲಿರುವ 200 ಜನರ ಪೈಕಿ ಎಲ್ಲರೂ ಹಣ ನೀಡಿ ನಿರ್ಮಾಣ ಮಾಡುತ್ತಿರುವ ಮಂದಿರ ಇದಾಗಿದೆ. ಸಿದ್ದರಾಮಯ್ಯ ಹಾಗೂ ಯತೀಂದ್ರ ಸಹಾಯವೂ ಇದೆ. ಗಮನಾರ್ಹವೆಂದರೆ ಮೂಲತಃ ಹೆಂಚಿನ ಮನೆಯಲ್ಲಿದ್ದ ಹಳೆಯ ರಾಮಮಂದಿರ ಇದಾಗಿದ್ದು, ಇದೀಗ ಗ್ರಾಮಸ್ಥರು ಜೀರ್ಣೋದ್ಧಾರ ಮಾಡುತ್ತಿದ್ದಾರೆ.
ಶ್ರೀರಾಮ ಜನರ ಧಾರ್ಮಿಕ ನಂಬಿಕೆ:
ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಈ ರಾಮ ಮಂದಿರದ ನಿರ್ಮಾಣಕ್ಕೆ ಜನರು ಹಣ ನೀಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ತಿಳಿಸಿದ್ದರು. ಶ್ರೀರಾಮ ಜನರ ಧಾರ್ಮಿಕ ನಂಬಿಕೆ ಎಂದಿರುವ ಸಿದ್ದರಾಮಯ್ಯ ಅವರು ಎಲ್ಲಾ ಕಡೆ ರಾಮ ಮಂದಿರವನ್ನು ಕಟ್ಟುತ್ತಾರೆ. ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ, ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕಾಗಿ ಬಳಸುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ:
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ
Published On - 5:35 pm, Sat, 20 February 21