ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು.

  • TV9 Web Team
  • Published On - 16:43 PM, 20 Feb 2021
ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?
ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣಗೊಂಡ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್​

ಬೆಂಗಳೂರು: ದೇಶದಲ್ಲಿ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಹೊಂದಿದ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ​ಭಾರತೀಯ ರೈಲ್ವೆ ಇಲಾಖೆ, ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ಈ ಆಧುನಿಕ ಟರ್ಮಿನಲ್​ ಸಿದ್ಧಗೊಂಡಿದ್ದು, ಇದಕ್ಕೆ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಂಬ ಹೆಸರೂ ನಿಗದಿಯಾಗಿದೆ. ಟರ್ಮಿನಲ್​ನಲ್ಲಿ ಹಲವು ಮುಂದುವರಿದ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಸಚಿವ ಪಿಯುಷ್ ಗೋಯಲ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನು ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್​ ಆಗಿರುವ ಇದರಲ್ಲಿ ವಿಐಪಿಗಳ ವಿರಾಮ ಕೊಠಡಿ, ಫುಡ್​ ಕೋರ್ಟ್​, ನೈಜ ಸಮಯದಲ್ಲಿರುವ ಪ್ರಯಾಣಿಕರ ಮಾಹಿತಿ ನೀಡುವ ಡಿಜಿಟಲ್​ ವ್ಯವಸ್ಥೆ ಇದೆ ಎಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ. ಹಾಗೇ, ಈ ಕೇಂದ್ರೀಕೃತ ಎಸಿ ಟರ್ಮಿನಲ್ ದೇಶದಲ್ಲೇ ಅತ್ಯಂತ ದೊಡ್ಡ ಟರ್ಮಿನಲ್​ ಆಗಿದೆ ಎಂದೂ ಹೇಳಿದೆ.

ಹೇಗಿದೆ ಟರ್ಮಿನಲ್​?
ಅತ್ಯಾಧುನಿಕ ವ್ಯವಸ್ಥೆಯುಳ್ಳ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್​, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ದೇಶಾದ್ಯಂತ ಇರುವ ವಿವಿಧ ರೈಲ್ವೆ ನಿಲ್ದಾಣಗಳಿಗೆ ಇಲ್ಲಿಂದ ರೈಲು ವ್ಯವಸ್ಥೆ ಇರಲಿದೆ. ಸುಮಾರು 4200 ಚದರ ಕಿಮೀ ವಿಸ್ತೀರ್ಣದಲ್ಲಿ, 314 ಕೋಟಿ ರೂ.ವೆಚ್ಚದಲ್ಲಿ ಟರ್ಮಿನಲ್​ ನಿರ್ಮಾಣ ಮಾಡಲಾಗಿದ್ದು, ದಿನಕ್ಕೆ 50 ರೈಲುಗಳು ಕಾರ್ಯಾಚರಣೆ ಮಾಡಲಿದ್ದು, 50,000 ಪ್ರಯಾಣಿಕರು ಸಂಚರಿಸಬಹುದಾಗಿದೆ. ಇಲ್ಲಿ, ಎಲ್ಲ 7 ಪ್ಲಾಟ್​ಫಾರಂಗಳನ್ನೂ ಸಂಪರ್ಕಿಸುವಂತೆ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗಿದ್ದು, ಒಂದು ಓವರ್​ ಬ್ರಿಜ್​ ಸಹ ಇದೆ. ಮೂರು ಪಿಟ್​ಲೈನ್​ಗಳು ಹಾಗೂ ಎಂಟು ಸ್ಟೇಬಲಿಂಗ್​ ಲೈನ್​ಗಳಿವೆ. ಪ್ಲಾಟ್​ಫಾರಂ ಒಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಲಿಫ್ಟ್, ಎಸ್ಕಲೇಟರ್​ ವ್ಯವಸ್ಥೆಗಳನ್ನೂ ಮಾಡಲಾಗಿದೆ. ವೇಟಿಂಗ್ ಹಾಲ್​ ಕೂಡ ವಿಶಾಲವಾಗಿದೆ.

ಇದರೊಂದಿಗೆ 900 ದ್ವಿಚಕ್ರವಾಹನಗಳು, 250 ಕಾರುಗಳು, 5 ಬಿಎಂಟಿಸಿ ಬಸ್​ ಮತ್ತು 50 ಆಟೋರಿಕ್ಷಾಗಳು, 20 ಕ್ಯಾಬ್​ಗಳನ್ನು ಪಾರ್ಕಿಂಗ್ ಮಾಡಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಬೆಂಗಳೂರು ಏರ್​ಪೋರ್ಟ್ ಮಾದರಿಯಲ್ಲೇ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಟ್ಟಲಾಗಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು. ಆದರೆ ಹಲವು ಅಡೆತಡೆಗಳಿಂದಾಗಿ ಮತ್ತೆ ಎರಡು ವರ್ಷ ಮುಂದೂಡಲ್ಪಟ್ಟಿತು.

ಮಾರ್ಚ್​ 15ರೊಳಗೆ ಉದ್ಘಾಟನೆ
ಫೆಬ್ರವರಿ ಅಂತ್ಯಕ್ಕೆ ಟರ್ಮಿನಲ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗಿತ್ತು.  ಆದರೆ ಅದು ಇನ್ನೂ ಮುಂದೆ ಹೋಗುವ ಸಾಧ್ಯತೆ ಇದೆ. ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್​ ಕುಮಾರ್ ವರ್ಮಾ, ನಾವು ಪ್ರಧಾನಿ ಕಚೇರಿ ನೀಡುವ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಮಾರ್ಚ್​ 15ರೊಳಗೆ ಉದ್ಘಾಟನೆಗೊಳ್ಳುವ ಭರವಸೆ ಇದೆ. ಒಟ್ಟು ಏಳು ಪ್ಲಾಟ್​ಫಾರಂಗಳಲ್ಲಿ 5 ಸಂಪೂರ್ಣಗೊಂಡಿದ್ದು, ಇನ್ನೂ 2  ಪ್ಲಾಟ್​ಫಾರಂಗಳನ್ನು ಮುಂದಿನ 2-3 ತಿಂಗಳುಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ