ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ

Ram mandir construction | ಶ್ರೀರಾಮ ಜನರ ಧಾರ್ಮಿಕ ನಂಬಿಕೆ ಎಂದಿರುವ ಸಿದ್ದರಾಮಯ್ಯ ಅವರು ಎಲ್ಲಾ ಕಡೆ ರಾಮ ಮಂದಿರವನ್ನು ಕಟ್ಟುತ್ತಾರೆ. ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ, ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕಾಗಿ ಬಳಸುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. 

  • TV9 Web Team
  • Published On - 11:15 AM, 20 Feb 2021
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ
ಶ್ರೀರಾಮ ಜನರ ಧಾರ್ಮಿಕ ನಂಬಿಕೆ! ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಈ ರಾಮ ಮಂದಿರದ ನಿರ್ಮಾಣಕ್ಕೆ ಜನರು ಹಣ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶ್ರೀರಾಮ ಜನರ ಧಾರ್ಮಿಕ ನಂಬಿಕೆ ಎಂದಿರುವ ಸಿದ್ದರಾಮಯ್ಯ ಅವರು ಎಲ್ಲಾ ಕಡೆ ರಾಮ ಮಂದಿರವನ್ನು ಕಟ್ಟುತ್ತಾರೆ. ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ, ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕಾಗಿ ಬಳಸುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ಟೀಕೆಗೆ ಸ್ವಾಗತ
ಇತ್ತೀಚೆಗೆ ಮಾಧ್ಯಮಗಳಲ್ಲಿ ನನ್ನನ್ನು ಹೆಚ್ಚು ಟೀಕಿಸುತ್ತಾರೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು. ಸರ್ವಾಧಿಕಾರಿತನ ಇರಬಾರದು. ನಾನು ಟಿವಿಗಿಂತ ಪತ್ರಿಕೆ ಜಾಸ್ತಿ ಓದುತ್ತೇನೆ. ಇತ್ತೀಚೆಗೆ ಮಾಧ್ಯಮದವರಿಗೆ ನನ್ನ ಟೀಕೆ ಮಾಡಿಲ್ಲ ಅಂದರೆ ನಿದ್ದೆ ಬರುವುದಿಲ್ಲ ಎಂದರು.

ಮೈತ್ರಿಗೆ ಗ್ರೀನ್ ಸಿಗ್ನಲ್
ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿದ್ದರಾಮಯ್ಯ ತವರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಗೆ ನನ್ನ ವಿರೋಧ ಇಲ್ಲ. ಹಳೆಯ ಒಪ್ಪಂದದಂತೆ ನಮಗೆ ಮೇಯರ್ ಸ್ಥಾನ ನೀಡಬೇಕು. ಮೇಯರ್ ಸ್ಥಾನ ಕೊಟ್ಟರೆ ಮೈತ್ರಿ ಮುಂದುವರಿಕೆಗೆ ಹೇಳಿದ್ದೇನೆ. ಎಲ್ಲರೂ ಒಗ್ಗಟ್ಟಾಗಿರಿ ಜಗಳ ಮಾಡಿಕೊಳ್ಳದಂತೆ ಹೇಳಿದ್ದೇನೆ ಎಂದು ತಿಳಿಸಿದರು.

ರಾಜ್ಯ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ. ಇದಕ್ಕೆ ಕಾರಣ ಇವರ ಬಳಿ ಹಣವೇ ಇಲ್ಲ. ನಾನು ಕೇಳಿದ ಯಾವ ಪ್ರಶ್ನೆಗೂ ರಾಜ್ಯದ ಮುಖ್ಯಮಂತ್ರಿ ಉತ್ತರ ನೀಡಿಲ್ಲ. ಇನ್ನು ಇವರು ಬಜೆಟ್ನಲ್ಲಿ ಏನು ಉತ್ತರ ಕೊಡುತ್ತಾರೆ. ಪ್ರಶ್ನೆ ಕೇಳಿದರೇ ಬರೆದುಕೊಂಡು ಬಂದು ಉತ್ತರಿಸುತ್ತಾರೆ. ಹೀಗಾಗಿ ನನಗೆ ನಂಬಿಕೆಯಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಇದರಲ್ಲೂ ಭ್ರಷ್ಟಾಚಾರ ಮಾಡಲು ಕಾಯುತ್ತಿರುವಂತಿದೆ. ಭ್ರಷ್ಟಾಚಾರವೇ ಇವರ ಕೆಲಸವಾಗಿದೆ. ಎಲ್ಲಿ ಕೆಲಸ ಇದೆಯೋ ಅಲ್ಲಿ ದುಡ್ಡು ಹೊಡೆಯುತ್ತಾರೆ. ಕೊರೊನಾ ಮೊದಲ ಅಲೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಇದನ್ನು ನಾನು ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದೇನೆ. ಈಗಲೂ ಅದೇ ನಡೆಯುತ್ತದೆ. ಸರ್ಕಾರ ಯಾವ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಇದನ್ನೂ ಓದಿ:
ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ಸಿದ್ದರಾಮಯ್ಯ!

ಇದನ್ನೂ ಓದಿ:
Ayodhya Ram Mandir | ರಾಮಮಂದಿರ ನಿರ್ಮಾಣಕ್ಕೆ.. ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ