SSLC Exam 2021 Revised Timetable: ಎಸ್​ಎಸ್​ಎಲ್​ಸಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

| Updated By: guruganesh bhat

Updated on: Jun 28, 2021 | 7:20 PM

ಎಸ್​ಎಸ್​ಎಲ್​ಸಿ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಜುಲೈ 19ರ ಮಧ್ಯಾಹ್ನ ಕಿರಿಯ ತಾಂತ್ರಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜತೆಗೆ ಜುಲೈ 22ರಂದು NSQF ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಈ ಎರಡು ವೇಳಾಪಟ್ಟಿಯನ್ನು ಹೊಸದಾಗಿ ಸೇರಿಸಲಾಗಿದೆ.

SSLC Exam 2021 Revised Timetable: ಎಸ್​ಎಸ್​ಎಲ್​ಸಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ವಿವರ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಜುಲೈ 19ರಂದು(ಸೋಮವಾರ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಬೆಳಗ್ಗೆ 10.30ರಿಂದ 1.30ರ ತನಕ ಅದೇ ದಿನ ಮಧ್ಯಾಹ್ನ ಕಿರಿಯ ತಾಂತ್ರಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜುಲೈ 22ರಂದು (ಗುರುವಾರ) ಬೆಳಗ್ಗೆ 10.30ರಿಂದ 1.30ರ ತನಕ ಭಾಷಾ ವಿಷಯಗಳ (ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್) ಪರೀಕ್ಷೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ  NSQF ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್​ 30ರಂದು ಪರೀಕ್ಷಾ ಹಾಲ್​ಟಿಕೆಟ್​ಗಳನ್ನು ಶಾಲೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವರ್ಷ 8,76,581 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ, ಕಳೆದ ಬಾರಿ 8 ಲಕ್ಷದ 46 ಸಾವಿರ ವಿದ್ಯಾರ್ಥಿಗಳಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆಗೆಂದೇ ಈ ವರ್ಷ 73,066 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಂದ 200 ಮೀಟರ್​ ಅಂತರದಲ್ಲಿ ನಿಷೇಧಾಜ್ಞೆ ಇರಲಿದೆ ಎಂದು ತಿಳಿಸಿದ್ದಾರೆ.

ಯಾವುದಾದರೂ ಮಗುವಿಗೆ ಪಾಸಿಟಿವ್​ ಇದ್ದರೂ ಪರೀಕ್ಷೆ ಬರೆಯುವ ಆಸೆ ಇದ್ದರೆ, ಹತ್ತಿರದ ಕೊವಿಡ್​ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಜತೆಗೆ, ಪರೀಕ್ಷೆ ಬರೆಯುವಾಗ ಯಾವುದಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಮಕ್ಕಳಿಗೆ ಎನ್​ 95 ಮಾಸ್ಕ್​ ಅಗತ್ಯವಿಲ್ಲ, ಉತ್ತಮ ಬಟ್ಟೆಯ ಮಾಸ್ಕ್​ ಸಾಕು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಸ್ವಚ್ಛವಾದ ಬಟ್ಟೆಯ ಮಾಸ್ಕ್​ ಅಥವಾ ಸರ್ಜಿಕಲ್​ ಮಾಸ್ಕ್​ ಬಳಕೆ ಮಾಡಬಹುದು. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಎನ್​95 ಕಡ್ಡಾಯ ಎಂದು ಸೂಚಿಸಿದ್ದಾರೆ. ಅಂತೆಯೇ, ಕೊವಿಡ್​ ಕಾರಣಕ್ಕೆ ಯಾವುದಾದರೂ ವಿದ್ಯಾರ್ಥಿ ಪರೀಕ್ಷೆ ಬರೆಯಲಾಗದಿದ್ದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ನೀಡಿ, ಹೊಸಬರೆಂದೇ ಪರಿಗಣಿಸಿ ಪರೀಕ್ಷೆ ಬರೆಸಲಾಗುವುದು ಇದರಲ್ಲಿ ಭಯಬೇಡ ಎಂದು ಹೇಳಿದ್ದಾರೆ.

ಎಲ್ಲಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುವುದು, ಪರೀಕ್ಷಾ ಚಟುವಟಿಕೆಗಳಿಗೆ ಸಹಾಯ ಮಾಡಲು ಸ್ಕೌಟ್ಸ್​ ಅಂಡ್​ ಗೈಡ್ಸ್​ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ. ಇನ್ನು ಆಶಾ ಕಾರ್ಯಕರ್ತೆಯರೂ ಜತೆಯಿರಲಿದ್ದಾರೆ. ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಣೆಗೆ ಭಾರೀ ಭದ್ರತೆ ಕಲ್ಪಿಸಲಾಗುವುದು. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವದಂತಿಗಳನ್ನು ಹರಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಬರುವ ಸಿಬ್ಬಂದಿ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಆಗಿರಬೇಕು. ಲಸಿಕೆ ತೆಗೆದುಕೊಂಡ ನಂತರವೂ ಯಾವುದಾದರೂ ಸಿಬ್ಬಂದಿಗೆ ರೋಗ ಲಕ್ಷಣವಿದ್ದರೆ ಅವರನ್ನು ವಾಪಾಸು ಕಳಿಸಬೇಕು ಎಂದು ಹೇಳಲಾಗಿದೆ. ಮಕ್ಕಳಿಗೆ ಹೋಗುವಾಗ, ಬರುವಾಗ ಸ್ಯಾನಿಟೈಸ್ ಕೂಡಾ ಮಾಡುತ್ತೇವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಮಕ್ಕಳು ಇದನ್ನು ಅನುಸರಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

ಇದನ್ನೂ ಓದಿ:
Big Update: ರಾಜ್ಯದಲ್ಲಿ ಕೊವಿಡ್ 3ನೇ ಅಲೆ ಎದುರಿಸಲು ಹೊಸ ಸಮಿತಿ ರಚನೆಗೆ ತೀರ್ಮಾನ

ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

(SSLC Exam 2021 revised time table released by Karnataka education department)