ಪ್ರತಿದಿನ ಹೊಸ ತಿರುವು ಕಾಣುತ್ತಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಗರಣಕ್ಕೀಗ ರಾಜಕೀಯ ಲೇಪ, ತನಿಖೆಗೆ ದೊಡ್ಡ ಗೌಡರ ಕುಟುಂಬ ಅಡ್ಡಗಾಲು?
ರಾಜ್ಯದ ಹಾಲು ಒಕ್ಕೂಟಗಳಲ್ಲಿ ಒಂದಾಗಿರುವ ಮತ್ತು ಜಿಲ್ಲೆಯ ರೈತರ ಬದುಕಿನ ಆಧಾರವಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಈಗ ರಾಜ್ಯದ ಗಮನ ಸೆಳೆದಿದೆ. ಕಳೆದ ತಿಂಗಳು ಇದೇ ಹಾಲು ಒಕ್ಕೂಟದಲ್ಲಿ ನೀರು-ಮಿಶ್ರಿತ ಹಾಲು ಪ್ರಕರಣವು ಬೆಳಕಿಗೆ ಬಂದ ನಂತರ ಅದು ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ ಎನ್ನಲಾಗಿರುವ ಸದರಿ ಪ್ರಕರಣಕ್ಕೆ ಈಗ ರಾಜಕೀಯ ಲೇಪ ಸಹ ಮೆತ್ತಿಕೊಂಡಿದೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಸ್ಥಾಪಿತವಾಗಿರುವ ಈ ಹಾಲು ಒಕ್ಕೂಟದ […]
ರಾಜ್ಯದ ಹಾಲು ಒಕ್ಕೂಟಗಳಲ್ಲಿ ಒಂದಾಗಿರುವ ಮತ್ತು ಜಿಲ್ಲೆಯ ರೈತರ ಬದುಕಿನ ಆಧಾರವಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಈಗ ರಾಜ್ಯದ ಗಮನ ಸೆಳೆದಿದೆ. ಕಳೆದ ತಿಂಗಳು ಇದೇ ಹಾಲು ಒಕ್ಕೂಟದಲ್ಲಿ ನೀರು-ಮಿಶ್ರಿತ ಹಾಲು ಪ್ರಕರಣವು ಬೆಳಕಿಗೆ ಬಂದ ನಂತರ ಅದು ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ ಎನ್ನಲಾಗಿರುವ ಸದರಿ ಪ್ರಕರಣಕ್ಕೆ ಈಗ ರಾಜಕೀಯ ಲೇಪ ಸಹ ಮೆತ್ತಿಕೊಂಡಿದೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಸ್ಥಾಪಿತವಾಗಿರುವ ಈ ಹಾಲು ಒಕ್ಕೂಟದ ಅಧಿಕಾರವು ಪ್ರಸ್ತುತವಾಗಿ ಜೆಡಿಎಸ್ ಸದಸ್ಯರ ಕೈಯಲ್ಲಿದೆ. ಚುನಾವಣೆ ಸಮಯದಲ್ಲೂ ಸಾಕಷ್ಟು ಸದ್ದು ಮಾಡಿದ್ದ ಒಕ್ಕೂಟ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಜಿಲ್ಲೆಯ ನೂರಾರು ಹಳ್ಳಿಗಳಿಂದ ಹಾಲನ್ನು ಸಂಗ್ರಹಿಸುವ ಹಾಲು ಒಕ್ಕೂಟದಲ್ಲಿ ದಿನವೊಂದಕ್ಕೆ 9.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ.
ಒಕ್ಕೂಟದ ಆವರಣದಲ್ಲೇ ಮೆಗಾ ಡೈರಿಯ ಕೆಲಸವೂ ನಡೆಯುತ್ತಿದ್ದು, ಜಿಲ್ಲೆಯ ಸಾವಿರಾರು ರೈತರು ಇದೇ ಹಾಲು ಒಕ್ಕೂಟವನ್ನ ನಂಬಿ ಬದುಕು ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಬದುಕಿನ ಆಧಾರ ಸ್ತಂಭವಾಗಿರುವ ಈ ಹಾಲು ಒಕ್ಕೂಟದಲ್ಲಿ ಯಾರೂ ನಿರೀಕ್ಷೆ ಮಾಡದ ಹಗರಣವೊಂದು ಬೆಳಕಿಗೆ ಬಂದು ಬಿಟ್ಟಿದೆ ಮತ್ತು ಅದಕ್ಕೆ ಹಳ್ಳಿಗಳಿಂದ ಹಾಲನ್ನು ಸಂಗ್ರಹಿಸಿ ಒಕ್ಕೂಟಕ್ಕೆ ತರುವ ಗುತ್ತಿಗೆ ಪಡೆದುಕೊಂಡಿರೊ ಗುತ್ತಿಗೆದಾರರೇ ಕಾರಣ ಅನ್ನೋದು ವಿಶೇಷ.
ಹಗರಣ ಹೇಗೆ ಬೆಳಕಿಗೆ ಬಂತು?
ದಿನವೊಂದಕ್ಕೆ 9 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗ್ತಿರೊ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಲಾಕ್ ಡೌನ್ ಸಮಯದಲ್ಲಿ ಜಿಲ್ಲೆಯ ಹಳ್ಳಿಗಳ ಕೆಲವು ಮಾರ್ಗಗಳಿಂದ ಬರುವ ಟ್ಯಾಂಕರ್ ಗಳಿಂದ ಹಾಲು ನಿರೀಕ್ಷಿತ ಗುಣಮಟ್ಟ ಹೊಂದರಲಿಲ್ಲ. ಇದರಿಂದ ಅನುಮಾನಗೊಂಡ ಒಕ್ಕೂಟದ ಅಧ್ಯಕ್ಷ ರಾಮಚಂದ್ರು ಮತ್ತು ಪದಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದಾಗ ಇಡೀ ಹಗರಣ ಬೆಳಕಿಗೆ ಬಂದಿದೆ. ಯಾವಾಗ ಕೆಲವು ಮಾರ್ಗಗಳಿಂದ ಬರುವ ಟ್ಯಾಂಕರ್ ಗಳಲ್ಲಿನ ಹಾಲು ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬುದು ಗೊತ್ತಾಯಿತೋ ಆಗಲೇ ಆ ಟ್ಯಾಂಕರರ್ಗಳನ್ನ ಹಿಂಬಾಲಿಸಲಾರಂಭಿಸಿದ್ದ ಒಕ್ಕೂಟದ ಪದಾಧಿಕಾರಿಗಳಿಗೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಬಳಿ ಟ್ಯಾಂಕರ್ ನಿಂತಿರುವುದು ಕಂಡು ಬಂದಿದೆ. ಅದನ್ನು ಪರಿಶೀಲಿಸಿದಾಗಲೇ ಹಗರಣ ಬೆಳಕಿಗೆ ಬಂದಿತ್ತು.
ಹಾಲಿನ ಟ್ಯಾಂಕರ್ನಲ್ಲೇ ನೀರಿನ ಟ್ಯಾಂಕರ್ ವಿನ್ಯಾಸಗಗೊಂಡಿತ್ತು!
ಹೌದು ಎಲ್ಲರೂ ಟ್ಯಾಂಕರ್ ನಲ್ಲಿ ಹಾಲನ್ನಷ್ಟೇ ತುಂಬಿಕೊಂಡು ಬರುತ್ತಿದ್ದಾರೆ ಎಂದೇ ನಂಬಿದ್ದರು. ಆದರೆ ಅಂದು ಹಾಲಿನ ಜೊತೆಗೆ ಸಾವಿರಾರು ಲೀಟರ್ ನೀರನ್ನೂ ತುಂಬಿಕೊಂಡು ಬರಬಹುದು ಎಂಬುದು ಬಹಿರಂಗವಾಗಿತ್ತು.
ಮನ್ಮುಲ್ ನಲ್ಲಿ ಹಾಲು ತುಂಬಿಕೊಂಡು ಬರುತ್ತಿದ್ದ ಒಂದು ಟ್ಯಾಂಕರ್ ನಲ್ಲಿ 2500 ಲೀಟರ್ ನಿಂದ 3 ಸಾವಿರ ಲೀಟರ್ ವರೆಗೂ ನೀರು ತುಂಬಿಸಬಹುದಾದ ರೀತಿಯಲ್ಲೇ ವಿನ್ಯಾಸಗೊಳಿಸಲಾಗಿತ್ತು.
ನೋಡಿದವರಿಗೆ ಸ್ವಲ್ಪವೂ ಅನುಮಾನಬಾರದ ರೀತಿಯಲ್ಲಿ ಹಾಲು ತುಂಬಿಸೊ ಕ್ಯಾಬಿಲ್ ಗಳ ಪಕ್ಕದಲ್ಲೇ ನೀರನ್ನು ತುಂಬಿಸುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದ ದುಷ್ಕರ್ಮಿಗಳು ಬೆಳಗ್ಗೆ ಮತ್ತು ಸಂಜೆ ಹಳ್ಳಿಗಳ ಡೈರಿಯಿಂದ ಹಾಲನ್ನು ತುಂಬಿಸಿಕೊಳ್ಳಲು ಹೋಗುವ ಮೊದಲೇ ಟ್ಯಾಂಕರ್ ನಲ್ಲಿ 2500 ಲೀಟರ್ ಇಂದ 3 ಸಾವಿರದ ವರೆಗೂ ನೀರನ್ನು ತುಂಬಿಸಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಹಾಲನ್ನ ತುಂಬಿಸಿಕೊಂಡು ವಾಪಸ್ ಬರುವಾಗ ಒಂದು ನಿರ್ದಿಷ್ಟ ಸ್ಥಳಕ್ಕೆಹೋಗಿ ನೀರಿದ್ದಷ್ಟು ಪ್ರಮಾಣದ ಹಾಲನ್ನ ಮತ್ತೊಂದು ಟ್ಯಾಂಕರ್ ಗೆ ತುಂಬಿಸಿಕೊಂಡು ಖಾಸಗಿಯಾಗಿ ಮಾರಾಟ ಮಾಡಿಕೊಳ್ಳುತ್ತಿದ್ದರು.
ಇತ್ತ ಹಾಲು ಮತ್ತು ನೀರನ್ನು ತುಂಬಿಕೊಂಡಿದ್ದ ಟ್ಯಾಂಕರ್ ಅನ್ನ ಜಿಲ್ಲಾ ಒಕ್ಕೂಟದ ಡೈರಿಗೆ ತರುತ್ತಿದ್ದ ದುಷ್ಟರು ಅಲ್ಲಿ ತೂಕ ಹಾಕಿಸ್ತಿದ್ದರು. ನೀರು ಹಾಲಿನ ಜೊತೆಗೆ ನೀರು ತುಂಬಿರುತ್ತಿದ್ದರಿಂದ ತೂಕದಲ್ಲೇನು ವ್ಯಾತ್ಯಾಸ ಗೊತ್ತಾಗುತ್ತಿರಲಿಲ್ಲ. ನಂತರ ಅಲ್ಲಿಂದ ಹಾಲನ್ನ ಒಕ್ಕೂಟದಲ್ಲಿ ಅನ್ ಲೋಡ್ ಮಾಡುವ ಸಂದರ್ಭದಲ್ಲಿ ಟ್ಯಾಂಕರ್ ನಲ್ಲಿದ್ದ ನೀರು ಹಾಲಿನ ಜೊತೆ ಸೇರಿ ಅನ್ ಲೋಡ್ ಆಗುವಂತೆ ನೋಡಿಕೊಳ್ಳುತ್ತಿದ್ದರು.
ರಾಜಕೀಯ ತಿರುವು ಪಡೆದುಕೊಂಡ ಹಗರಣ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಗರಣ ನಡೆದಿದ್ದರಿಂದ ಸಹಜವಾಗಿಯೇ ಜನ ಈ ಹಗರಣದ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈವಾಡ ಇದೆ ಎಂದು ಮಾತನಾಡಿಕೊಳ್ಳಲಾರಂಭಿಸಿದ್ದರು. ಅದಕ್ಕೆ ಪೂರಕವಾಗಿ ಎಂಬಂತೆ ಸರ್ಕಾರ ಸಹ ಆರಂಭದಲ್ಲಿ ಚೆನ್ನಪಟ್ಟಣ ಮೂಲದ ರಾಜು ಎಂಬ ಗುತ್ತಿಗೆದಾರನೊಬ್ಬನ ವಿರುದ್ದ ಎಫ್ ಐ ಆರ್ ದಾಖಲಿಸಿ ಸುಮ್ಮನಾಗಿತ್ತು. ಹಗರಣ ಬೆಳಕಿಗೆ ಬಂದು 15 ದಿನಗಳೇ ಕಳೆದರೂ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.
ಈ ನಡುವೆ ಇದೇ ತಿಂಗಳ 14 ರಂದು ಬೆಂಗಳೂರಿನಲ್ಲಿ ಸಿ ಎಂ ಯಡಿಯೂರಪ್ಪ ಅವರೇ ಹಗರಣದ ಕುರಿತು ಸಿಐಡಿ ತನಿಖೆ ನಡೆಸಲಾಗುವುದು ಎಂದು ಘೋಷಿಸಿದ್ದರು. ಆ ವೇಳೆ ಸಿಎಂ ಅವರೇ ಸಿಐಡಿ ತನಿಖೆ ಬಗ್ಗೆ ಮಾತಾಡಿದ್ದರಿಂದ ಇನ್ನೇನು ತನಿಖೆ ನಡೆದು ಸತ್ಯಾಂಶ ಹೊರಬರಲಿದೆ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು.
ಆದರೆ, ಆ ನಿರೀಕ್ಷೆ ಹುಟ್ಟಿದಷ್ಟೇ ವೇಗವಾಗಿ ಮಾಯವಾಯಿತು. ಮುಖ್ಯಮಂತ್ರಿಗಳು ತನಿಖೆ ಕುರಿತು ಮಾತಾಡಿ ಎರಡು ವಾರ ಕಳೆದರೂ ಸಿಐಡಿ ಕಚೇರಿಗೆ ಸರ್ಕಾರದಿಂದ ಅಧಿಕೃತ ಆದೇಶ ಹೋಗಲೇ ಇಲ್ಲ. ಆಗಲೇ ಎಲ್ಲರು ಹಗರಣ ಹಳ್ಳ ಹಿಡಿಯಿತು ಎಂದುಕೊಳ್ಳಲಾರಂಭಿಸುತ್ತಿರುವಾಗಲೇ ಮೊನ್ನೆ ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಮನ್ಮುಲ್ ನ ಮಾಜಿ ಅಧ್ಯಕ್ಷ ಜವರೇಗೌಡ ಅವರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.
ಅದರಲ್ಲಿ ಮನ್ ಮುಲ್ ಹಗರಣ ಕುರಿತು ತನಿಖೆ ನಡೆಸದಂತೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಅವರೇ ಒತ್ತಡ ಹಾಕ್ತಿದ್ದಾರಂತೆ, ಇಲ್ಲದಿದ್ದರೆ ಈ ವೇಳೆಗೆ ಮನ್ಮುಲ್ ನ ಆಡಳಿತ ಮಂಡಳಿ ಸೂಪರ್ ಸೀಡ್ ಆಗ್ತಿತ್ತು ಎಂದು ಹೇಳಿದ್ದರು. ಆ ಮೂಲಕ ಹಗರಣದ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಇದೆ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದರು.
‘ಮನ್ಮುಲ್ ಹಗರಣ ಬಾರಿ ಪ್ರಮಾಣದಲ್ಲಿ ನಡೆದಿರುವುದರಿಂದ ಸಿಬಿಐ ತನಿಖೆ ನಡೆಸಬೇಕು. ಆಡಿಯೊದಲ್ಲಿ ಮಾತನಾಡಿರುವುದು ನಾನೇ, ಅದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಹಗರಣ ಕುರಿತು ನಾವು ಸಿ ಎಂ ಜೊತೆ ಮಾತನಾಡಿಲ್ಲ ಎಂದಾದರೆ ಮಾಜಿ ಪ್ರಧಾನಿ ದೇವೇಗೌಡರಾಗಲಿ, ಮಾಜಿ ಸಿಎಂ ಕುಮಾರಸ್ವಾಮಿ ಆಗಲಿ ಅವರೇ ಹೇಳಲಿ. ಹಗರಣ ದೊಡ್ಡ ಪ್ರಮಾಣದಲ್ಲಿ ನಡೆದಿರುವುದರಿಂದ ತನಿಖೆಯನ್ನು ಸಿಬಿಐಗೆ ವಹಿಸಲಿ, ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ
ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಲು ನೋಟೀಸ್ ನೀಡಿರುವ ಸರ್ಕಾರ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಜೆಡಿಎಸ್ ಆಡಳಿತ ಮಂಡಳಿ ಅಧಿಕಾರ ನಡೆಸುತ್ತಿದೆ. ಅಲ್ಲದೆ, ಇಂಥ ದೊಡ್ಡ ಪ್ರಮಾಣದ ಹಗರಣನ್ನು ಬೆಳಕಿಗೆ ತಂದಿರುವುದೂ ಸಹ ಇದೇ ಜೆಡಿಎಸ್ ಆಡಳಿತ ಮಂಡಳಿ. ಹಾಗಾಗೇ, ಹಗರಣಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ರೀತಿಯ ಸಹಕಾರ ನೀಡುತ್ತೇವೆ, ಸರ್ಕಾರ ಸಿಬಿಐ ತನಿಖೆಗೆ ಬೇಕಾದರೂ ವಹಿಸಲಿ ಎನ್ನುತ್ತಲೇ ಬಂದಿದೆಯಾದರೂ, ಚೆಲುವರಾಯಸ್ವಾಮಿ ಆಡಿಯೋ ಕ್ಲಿಪ್ಪಿಂಗ್ ಬಹ ಅವರ ಬಹಿರಂಗವಾದ ನಂತರ ಮಾಜಿ ಸಚಿವರು ಸಿದ್ದರಾಮಯ್ಯ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ಆಡಳಿತ ಮಂಡಳಿಯನ್ನ ಸೂಪರ್ ಸೀಡ್ ಮಾಡಿಸಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಿಡಿತ ಸಾಧಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದರು.
ಅದಕ್ಕೆ ಪೂರಕ ಎಂಬಂತೆ ಚೆಲುವರಾಯಸ್ವಾಮಿ ಅವರ ಅಂದಿನ ಆಡಿಯೋದಲ್ಲಿ ಇನ್ನೊಂದು ದಿನ ಕಳೆದಿದ್ದರೆ ಆಡಳಿತ ಮಂಡಳಿ ಸೂಪರ್ ಸೀಡ್ ಗೆ ನಿರ್ಧಾರ ಪ್ರಕಟವಾಗುತಿತ್ತು ಎಂದಿದ್ದರು.
ಇದರ ಬೆನ್ನಲ್ಲೇ ಸರ್ಕಾರ ಇದೇ ತಿಂಗಳ 14 ರಂದು ರಾಜ್ಯ ಸರ್ಕಾರ ಎಲ್ಲಾ ನಿರ್ದೇಶಕರಿಗೂ ನೋಟೀಸ್ ಜಾರಿ ಮಾಡಿದ್ದು, ತಡೆಯಾಜ್ಞೆ ನೀಡಬಾರದೆಂದು 15 ರಂದೇ ಕೋರ್ಟ್ ಗೆ ಕೇವಿಯಟ್ ಸಲ್ಲಿಸಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ದ ಹೈ ಕೋರ್ಟ್ ನಲ್ಲೇ ತಡೆಯಾಜ್ಞೆ ತಂದಿರೊ ನಿರ್ದೇಶಕರು ನಮ್ಮ ಆಡಳಿತ ಮಂಡಳಿಯಲ್ಲೇ ಹಗರಣ ಬಯಲಿಗೆ ತರಲಾಗಿದೆ. ಅಲ್ಲದೆ, ಸಿಬಿಐ ತನಿಖೆ ನಡೆಸುವಂತೆ ನಾವೇ ಒತ್ತಾಯ ಹೇರುತ್ತಿದ್ದೇವೆ, ಹಾಗಿದ್ದರೂ ನಮ್ಮ ಆಡಳಿತ ಮಂಡಳಿಯನ್ನ ಯಾಕೆ ಸೂಪರ್ ಸೀಡ್ ಮಾಡಬೇಕು ಎಂದು ಪ್ರಶ್ನಿಸಿರುವ ಮನ್ಮುಲ್ ನ ಅಧ್ಯಕ್ಷ ರಾಮಚಂದ್ರು ಇಡೀ ಘಟನೆಯ ಹಿಂದೆ ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಅವರಿದ್ದಾರೆ ಎಂದಿದ್ದಾರೆ.
ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ಹಗರಣದ ತನಿಖೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಏತನ್ಮಧ್ಯೆ, ಇದು ಯಾಕೆ ಮತ್ತು ಹೇಗೆ ರಾಜಕೀಯ ತಿರುವು ಪಡೆದುಕೊಂಡಿರುವುದು ಅನ್ನೋದು ನಿಗೂಢವಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿನ ಹಾಲಿಗೆ ನೀರು ಬೆರೆಸಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಯಡಿಯೂರಪ್ಪ ಘೋಷಣೆ