ಮಂಡ್ಯದಲ್ಲಿನ ಹಾಲಿಗೆ ನೀರು ಬೆರೆಸಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಯಡಿಯೂರಪ್ಪ ಘೋಷಣೆ

ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಅಕ್ರಮದ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಮಂಡ್ಯದಲ್ಲಿನ ಹಾಲಿಗೆ ನೀರು ಬೆರೆಸಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಯಡಿಯೂರಪ್ಪ ಘೋಷಣೆ
Follow us
TV9 Web
| Updated By: guruganesh bhat

Updated on:Jun 14, 2021 | 3:24 PM

ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾವಣೆ ಮಾಡಿ ಒಕ್ಕೂಟಕ್ಕೆ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿದ್ದೇವೆ. ಜತೆಗೆ, ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಅಕ್ರಮದ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸುತ್ತಿದ್ದ ಜಾಲ ಮೇ 31ರಂದು ಪತ್ತೆಯಾಗಿ ಜಿಲ್ಲಾದ್ಯಂತ ಸಂಚಲನ ಸೃಷ್ಟಿಸಿತ್ತು. ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ನಿತ್ಯ ಸಾವಿರಾರು ಲೀಟರ್ ಹಾಲಿಗೆ ನೀರು ಮಿಶ್ರಣ ಮಾಡಿ ಸಾಗಿಸುತ್ತಿದ್ದ ಜಾಲ  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿಕ್ಕಿಬಿದ್ದಿತ್ತು. ಶಿಥಿಲೀಕರಣ ಕೇಂದ್ರಗಳಿಂದ ಒಕ್ಕೂಟಕ್ಕೆ ಸಾಗಿಸುವ ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸಲಾಗುತ್ತಿದ್ದು, ಹಾಲಿನ ಪರೀಕ್ಷೆ ಮುಗಿದ ಬಳಿಕ ನೀರು ಮಿಶ್ರಣವಾಗುತ್ತಿತ್ತು ಎಂದು ಹೇಳಲಾಗಿತ್ತು.

ನೀರು ಮಿಶ್ರಿತ ಹಾಲು ಬರುವಂತೆ ಟ್ಯಾಂಕರ್ ವಿನ್ಯಾಸಗೊಳಿಸಿ ಟ್ಯಾಂಕರ್ ಒಳಭಾಗದಲ್ಲಿ ನೀರು ತುಂಬಲು ಪ್ರತ್ಯೇಕ ವಿಭಾಗ ರೂಪಿಸಿದ್ದರು. ಅನುಮಾನಗೊಂಡು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ ಜಾಲ ಬಯಲಾಗಿದ್ದು, ವಂಚನೆ ನಡೆಸಲು ಬಳಸಿದ ವಿಧಾನಕ್ಕೆ ಆಡಳಿತ ಮಂಡಳಿ ದಂಗಾಗಿದೆ. ಸದ್ಯ 6 ಟ್ಯಾಂಕರ್​ಗಳನ್ನು ವಶಕ್ಕೆ ಪಡೆದ ಮದ್ದೂರು ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

Mandya Milk Golmaal

ವಶಪಡಿಸಿಕೊಂಡ ವಾಹನ

ಗೆಜ್ಜಲಗೆರೆ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವ ನಾರಾಯಣಗೌಡ ಡೈರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಒಕ್ಕೂಟದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರ ಸಮ್ಮುಖದಲ್ಲಿ ಹಾಲು ಸಾಗಿಸುವ ವಾಹನದಲ್ಲಿ ನೀರು ಮಿಕ್ಸ್ ಮಾಡುತ್ತಿದ್ದ ಬಗೆಯನ್ನು ಸಚಿವ ನಾರಾಯಣಗೌಡ ವೀಕ್ಷಿಸಿದ್ದರು.

ಈ ಪ್ರಕರಣವನ್ನೂ ಮುಚ್ಚಿಹಾಕುವುದು ಬೇಡ: ಕುಮಾರಸ್ವಾಮಿ ಟೀಕೆ ಇದೇ ವೇಳೆ ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಸೇರಿಸಿ ವಂಚಿಸಿದ್ದ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ತಾಲೂಕಿನ ಹನಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹರಿಹಾಯ್ದರು. ಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಈ ಪ್ರಕರಣವನ್ನೂ ಮುಚ್ಚಿಹಾಕುವುದು ಬೇಡ. ಹಣ ಲೂಟಿ ಮಾಡಿದವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಈ ಹಿಂದೆಯೂ ಮಂಡ್ಯದ ಮೂಡಾದಲ್ಲಿ ನಡೆದಿದ್ದ 5 ಕೋಟಿ ಹಗರಣ ನಂತರ ಏನಾಗಿದೆ ಎಂಬುದು ನಿಮಗೂ ತಿಳಿದಿದೆ. ನಾನಾಗಲಿ ಅಥವಾ ನನ್ನ ಪಕ್ಷವಾಗಲಿ ಜನರ ದುಡ್ಡು ತಿನ್ನಲು ಅವಕಾಶ ಕೊಡುವುದಿಲ್ಲ. ಮನ್ ಮುಲ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿಂದೆ ಯಾರಿದ್ದಾರೆ ಎಂಬುದು ನಿಮಗೂ ಗೊತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು.

ಇದನ್ನೂ ಓದಿ: Sanchari Vijay Obituary: ವಿಜಯ್​ ಕುಮಾರ್​ ‘ಸಂಚಾರಿ’ ವಿಜಯ್​ ಆಗಿದ್ದು ಹೇಗೆ? ಇಲ್ಲಿದೆ ಅವರ ಲೈಫ್​ ಜರ್ನಿ

ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ; ಕುಟುಂಬದಲ್ಲಿ ಒಬ್ಬರಿಗೆ ಮಾತ್ರ: ಸಿಎಂ ಯಡಿಯೂರಪ್ಪ ಘೋಷಣೆ

(CM Yeddyurappa announces CID probe into cheating case of Mymul Mandya Fraud mixed with water)

Published On - 3:21 pm, Mon, 14 June 21