ಬೆಂಗಳೂರು: ರಾಜ್ಯ ಸರ್ಕಾರ ಕಾಂಗ್ರೆಸ್ನ ಲಸಿಕೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪತ್ರ ಬರೆದಿದೆ. ಲಸಿಕೆಗಾಗಿ 100 ಕೋಟಿ ರೂ. ನೀಡಲು ಕಾಂಗ್ರೆಸ್ ಮುಂದಾಗಿತ್ತು. ಶಾಸಕರ ಪ್ರದೇಶಾಭಿವೃದ್ಧಿ ಹಣ ನೀಡಲು ಮುಂದಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ನೀಡಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಕೆ ಮಾಡಲಿದೆ. ಹೀಗಾಗಿ ಸರ್ಕಾರದಲ್ಲಿ ಸಂಪನ್ಮೂಲ ಕೊರತೆಯಾಗಿಲ್ಲ. ನೀವು ಸಹಾಯಧನ ಕೊಡಲು ಇಚ್ಛಿಸಿದರೆ ಸರ್ಕಾರ ನಿಗದಿಪಡಿಸಿದ ನಿಧಿಗೆ ನೀಡಬಹುದು ಎಂದು ಸಿದ್ದರಾಮಯ್ಯಗೆ ಸರ್ಕಾರ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿದೆ.
ಈಗಾಗಲೇ ಸರ್ಕಾರ ಶಾಸಕರ ನಿಧಿಯ ಶೇ.25 ರಷ್ಟು ಅನುದಾನವನ್ನು ಕೊವಿಡ್ ನಿಯಂತ್ರಣ ಕಾರ್ಯಗಳಿಗೆ ಬಳಸಲು ಅವಕಾಶವಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಸರ್ಕಾರದಲ್ಲಿ ಸಂಪನ್ಮೂಲ ಕೊರತೆ ಇಲ್ಲ. ಕಾಂಗ್ರೆಸ್ ಪಕ್ಷ ಮತ್ತು ಶಾಸಕರು ಲಸಿಕೆ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಇಚ್ಛಿಸಿದಲ್ಲಿ ತಮ್ಮ ವೈಯಕ್ತಿಕ ಹಣವನ್ನು ಸರ್ಕಾರ ನಿಗದಿಪಡಿಸಿದ ನಿಧಿಗೆ ದೇಣಿಗೆ ನೀಡಬಹುದು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳ ಮೂಲಕ ಸಹಾಯ ಮಾಡಬಹುದು. ಸರ್ಕಾರದ ನಿರ್ದಿಷ್ಟ ಯೋಜನೆಯ ಹಣವನ್ನು ಒಂದು ಪಕ್ಷದ ಹಣದೊಂದಿಗೆ ಹೊಂದಾಣಿಕೆ ಮಾಡುವುದು ಸೂಕ್ತವಲ್ಲ. ಸರ್ಕಾರದ ಹಣವನ್ನು ಒಂದು ಪಕ್ಷದ ಹಣವೆಂದು ಬಿಂಬಿಸಿ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಸಿಎಂ ತಮ್ಮ ಪ್ರಸ್ತಾವನೆಯನ್ನು ಒಪ್ಪಿರುವುದಿಲ್ಲ ಎಂದು ಸಿದ್ದರಾಮಯ್ಯಗೆ ಯೋಜನೆ ಖಾತೆ ಸಚಿವ ನಾರಾಯಣ ಗೌಡ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ
ಹೆಚ್ಚು ಹಣ ವಸೂಲಿ ಮಾಡಿದ ಆರೋಪ; ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್
ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ಹೇಳಿಕೆ
(state government rejected Congress vaccine proposal)