ಗಂಗಾವತಿ: ಬ್ಲಾಸ್ಟಿಂಗ್ನ ತೀವ್ರತೆಗೆ ನಿಂತ ನೆಲವೇ ನಡುಗಿದೆ. ಪಕ್ಕದಲ್ಲೇ ಇರೋ ಓವರ್ಹೆಡ್ ಟ್ಯಾಂಕ್ ಅಲುಗಾಡಿದೆ. ಕೂದಲೆಳೆ ಅಂತರದಲ್ಲೇ ತಾಲೂಕು ಕಚೇರಿ, ವಸತಿ ಗೃಹಗಳಿವೆ. ಇಷ್ಟೆಲ್ಲಾ ಇದ್ರೂ ಯಾವುದನ್ನೂ ಲೆಕ್ಕಿಸದೇ ಓಪನ್ ಪ್ಲೇಸ್ನಲ್ಲಿ ಕಲ್ಲು ಬ್ಲಾಸ್ಟಿಂಗ್ ಎಗ್ಗಿಲ್ಲದೆ ನಡೆಯುತ್ತಿದೆ.
ಇದನ್ನ ನೋಡಿದ್ರೆ ಎದೆ ಝಲ್ ಅನ್ನುತ್ತೆ. ಜನವಸತಿ ಪ್ರದೇಶದಲ್ಲಿ ಹೀಗೆಲ್ಲಾ ಬ್ಲಾಸ್ಟ್ ನಡೆಯುತ್ತಾ ಅನ್ಸುತ್ತೆ. ಅಂದ್ಹಾಗೆ ಇದೆಲ್ಲಾ ನಡೆಯುತ್ತಿರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ.
ಇಲ್ಲಾಗಿರೋದು ಇಷ್ಟೇ.. ಕೇಂದ್ರ ಸರ್ಕಾರದಿಂದ ಗಂಗಾವತಿಗೆ ಮಂಜೂರಾಗಿರೋ ಕೇಂದ್ರೀಯ ವಿದ್ಯಾಲಯ ಇಷ್ಟು ವರ್ಷ ಬೇರೆ ಕಟ್ಟಡದಲ್ಲಿ ನಡೀತಿತ್ತು. ಆದ್ರೀಗ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕೆಲಸ ಶುರುವಾಗಿದೆ. ಆದ್ರೆ ಕಟ್ಟಡಕ್ಕೆ ಅಡಿಪಾಯ ಹಾಕೋ ವೇಳೆ ಕಲ್ಲುಬಂಡೆಗಳು ಅಡ್ಡ ಬಂದಿವೆ. ಅದನ್ನ ಯಂತ್ರೋಪಕರಣಗಳ ಮೂಲಕ ತೆಗೀಬೇಕಾದ ಗುತ್ತಿಗೆದಾರ ಸ್ಫೋಟಕಗಳನ್ನ ಇಟ್ಟು ಬಂಡೆಯನ್ನ ಬ್ಲಾಸ್ಟ್ ಮಾಡ್ತಿದ್ದಾನೆ. ಇದ್ರಿಂದ ಭೂಮಿ ಕಂಪಿಸುತ್ತಿದ್ದು, ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ.
ಇದು ಇಳಿಜಾರು ಪ್ರದೇಶವಾಗಿದ್ದು ಗುಡ್ಡದ ತುತ್ತ ತುದಿಯಲ್ಲಿ ಗಂಗಾವತಿ ನಗರಕ್ಕೆ ಕುಡಿಯೋ ನೀರು ಕಲ್ಪಿಸೋ ಓವರ್ಹೆಡ್ ಟ್ಯಾಂಕ್ ಇದೆ. ಅಲ್ಲದೆ ಇದೇ ಪ್ರದೇಶಕ್ಕೆ ಹೊಂದಿಕೊಂಡಂತೆ ತಹಶೀಲ್ದಾರ್ ಕಚೇರಿ ಹಾಗೂ ಸಿಬ್ಬಂದಿಯ ವಸತಿಗೃಹವಿದ್ದು, ಇವುಗಳಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಘು ನಿಯಂತ್ರಿತ ಸ್ಫೋಟಕ ಬಳಸಿ ಅಂತ ಸೂಚಿಸಿದ್ರೂ ಗುತ್ತಿಗೆದಾರ ಕ್ಯಾರೆ ಅಂತಿಲ್ಲ.
ಒಟ್ನಲ್ಲಿ, ಗುತ್ತಿಗೆದಾರನ ಹಣದಾಸೆಗೆ ಸರ್ಕಾರಿ ಕಟ್ಟಡಗಳು ಸೇರಿದಂತೆ ಊರಿಗೆ ನೀರು ಪೂರೈಸೋ ಟ್ಯಾಂಕ್ಗೆ ಹಾನಿಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
Published On - 4:47 pm, Fri, 3 January 20