ಬೀದಿ ನಾಯಿಗಳಿಗೂ ತಟ್ಟಿದ ಮುಷ್ಕರದ ಬಿಸಿ; ಜನರ ಓಡಾಟ ಕಡಿಮೆಯಾಗಿ ಹಸಿವಿನಿಂದ ಕಂಗಾಲಾದ ನಾಯಿಗಳು

|

Updated on: Apr 08, 2021 | 9:25 AM

ಸಾಧಾರಣವಾಗಿ ಬಸ್​ ನಿಲ್ದಾಣದ ಅಂಗಡಿಗಳು ಹಾಗೂ ಪ್ರಯಾಣಿಕರು ನೀಡುವ ತಿಂಡಿಗಳನ್ನೇ ನೆಚ್ಚಿ ಬದುಕುವ ಬೀದಿ ನಾಯಿಗಳು ಬಸ್​ ನಿಲ್ದಾಣಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುತ್ತವೆ. ಆದರೆ, ಹೀಗೆ ಬಂದ್, ಮುಷ್ಕರಗಳು ಉಂಟಾದಾಗ ಪ್ರಯಾಣಿಕರು ಬಾರದೇ, ಅಂಗಡಿಗಳು ತೆರೆಯದೇ ಬೀದಿ ನಾಯಿಗಳಿಗೆ ಹೊಟ್ಟೆಗೆ ಏನೂ ಸಿಗದಾಗುತ್ತದೆ.

ಬೀದಿ ನಾಯಿಗಳಿಗೂ ತಟ್ಟಿದ ಮುಷ್ಕರದ ಬಿಸಿ; ಜನರ ಓಡಾಟ ಕಡಿಮೆಯಾಗಿ ಹಸಿವಿನಿಂದ ಕಂಗಾಲಾದ ನಾಯಿಗಳು
ಹಸಿವಿನಿಂದ ಪರದಾಡುತ್ತಿರುವ ಬೀದಿನಾಯಿ
Follow us on

ಗದಗ: ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಸಾರಿಗೆ ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಒಂದೆಡೆ ಬಸ್​ ಇಲ್ಲದೇ ಜನ ಸಾಮಾನ್ಯರು ಪರದಾಟ ನಡೆಸುತ್ತಿರುವ ದೃಶ್ಯಾವಳಿಗಳು ಸಾಮಾನ್ಯವಾಗಿದ್ದರೆ ಇನ್ನೊಂದೆಡೆ ಬಸ್​ ನಿಲ್ದಾಣವನ್ನೇ ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀದಿನಾಯಿಗಳು ಪ್ರಯಾಣಿಕರಿಲ್ಲದ ಕಾರಣ ಹಸಿವಿನಿಂದ ಕಂಗಾಲಾಗಿವೆ. ಗದಗದಲ್ಲಿ ಬೀದಿ ನಾಯಿಗಳು ಹಸಿವಿನಿಂದ ಒದ್ದಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವೆಂಬಂತೆ ಕಂಡುಬರುತ್ತಿದೆ.

ಸಾಧಾರಣವಾಗಿ ಬಸ್​ ನಿಲ್ದಾಣದ ಅಂಗಡಿಗಳು ಹಾಗೂ ಪ್ರಯಾಣಿಕರು ನೀಡುವ ತಿಂಡಿಗಳನ್ನೇ ನೆಚ್ಚಿ ಬದುಕುವ ಬೀದಿ ನಾಯಿಗಳು ಬಸ್​ ನಿಲ್ದಾಣಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುತ್ತವೆ. ದಿನಿತ್ಯವೂ ಸಾವಿರಾರು ಜನ ಪ್ರಯಾಣಿಸುವುದರಿಂದ ಒಬ್ಬರಲ್ಲಾ ಒಬ್ಬರು ಇವುಗಳ ಹಸಿವು ನೀಗಿಸುತ್ತಾರೆ. ಆದರೆ, ಹೀಗೆ ಬಂದ್, ಮುಷ್ಕರಗಳು ಉಂಟಾದಾಗ ಪ್ರಯಾಣಿಕರು ಬಾರದೇ, ಅಂಗಡಿಗಳು ತೆರೆಯದೇ ಬೀದಿ ನಾಯಿಗಳಿಗೆ ಹೊಟ್ಟೆಗೆ ಏನೂ ಸಿಗದಾಗುತ್ತದೆ. ಹೀಗಾಗಿ ಸದ್ಯ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಬಿಸಿ ಬೀದಿ ನಾಯಿಗಳಿಗೂ ತಟ್ಟಿದೆ ಎನ್ನುವಂತಾಗಿದೆ.

ನಾಯಿಗಳಿಗೆ ಆಹಾರ ತಿನ್ನಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ
ಮುಷ್ಕರದ ನಡುವೆ ಬಸ್​ ನಿಲ್ದಾಣದ ಕಡೆ್ಗೆ ಬಂದಿದ್ದ ಕೆಲ ಸಾರಿಗೆ ಸಿಬ್ಬಂದಿ ಬೀದಿನಾಯಿಗಳ ಪರದಾಟ ನೋಡಲಾಗದೇ ಅವುಗಳಿಗೆ ಆಹಾರ ತಿನ್ನಿಸಿ ಮಾನವೀಯತೆ ಮೆರೆದಿದ್ದಾರೆ. ನಿನ್ನೆಯಿಂದಲೂ ಸರಿಯಾಗಿ ತಿನ್ನಲು ಸಿಗದೆ ಬಳಲಿದ್ದ ನಾಯಿಗಳಿಗೆ ಆರೈಕೆ ಮಾಡಿದ್ದಾರೆ.

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲೂ ಹೀಗೆಯೇ ಆಗಿತ್ತು
ಕಳೆದ ಬಾರಿ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ಹೇರಿದ್ದಾಗಲೂ ಜನ ಸಂಚಾರ ಕಡಿಮೆಯಾಗಿ ಬೀದಿ ನಾಯಿಗಳು, ಪಕ್ಷಿಗಳು, ಬಿಡಾಡಿ ದನಗಳು ಹಸಿವಿನಿಂದ ಕಂಗಾಲಾಗಿದ್ದವು. ಅಂಗಡಿ ಮುಂಗಟ್ಟು, ಬೇಕರಿ, ಹೊಟೇಲ್, ಮಾಂಸದಂಗಡಿಗಳನ್ನು ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೂಕ ಪ್ರಾಣಿಗಳು ಲಾಕ್​ಡೌನ್​ ಅವಧಿಯಲ್ಲಿ ಆಹಾರ ಸಿಗದೇ ಒದ್ದಾಡಿದ್ದವು.

ಈ ವೇಳೆ ಬೀದಿ ನಾಯಿಗಳ ಬಗ್ಗೆ ಅಧ್ಯಯನ ನಡೆಸಿದ್ದ ಕೆಲ ವೈದ್ಯಕೀಯ ತಜ್ಞರು ಲಾಕ್​ಡೌನ್​ ವೇಳೆ ಹಸಿವಿನಿಂದ ಕಂಗೆಟ್ಟು, ಮನುಷ್ಯರ ಒಡನಾಟದಿಂದ ದೂರವಾದ ಬೀದಿನಾಯಿಗಳ ಮನಸ್ಥಿತಿಯಲ್ಲಿ ಬದಲಾವಣೆ ಆಗಿರುವ ಸಾಧ್ಯತೆ ಇದೆ. ಅವುಗಳ ವರ್ತನೆ ಮೊದಲಿಗಿಂತಲೂ ವ್ಯಗ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ:
ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು 

Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ

(Street dogs suffering from hunger as there is no Passengers in KSRTC BMTC stand due to strike)

Published On - 8:43 am, Thu, 8 April 21