ಹೊಸವರ್ಷಾಚರಣೆ ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; DIG ರವಿಕಾಂತೇಗೌಡ ಖಡಕ್ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 6:15 PM

ನಗರದ 44 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ 668 ಸೆಕ್ಟರ್​ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ನೈಸ್​ ರಸ್ತೆಯಲ್ಲೂ ಸಹ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಹೊರವಲಯದಲ್ಲಿರುವ ಮೇಲ್ಸೇತುವೆಗಳೂ ಮುಚ್ಚಿರುತ್ತವೆ.

ಹೊಸವರ್ಷಾಚರಣೆ ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; DIG ರವಿಕಾಂತೇಗೌಡ ಖಡಕ್ ಎಚ್ಚರಿಕೆ
ಡಿಐಜಿ ರವಿಕಾಂತೇಗೌಡ
Follow us on

ಬೆಂಗಳೂರು: ಹೊಸ ವರ್ಷಾಚರಣೆ ನಿಮಿತ್ತ ನೀವೇನಾದ್ರೂ ಭರ್ಜರಿ ಪ್ಲ್ಯಾನ್​ ಹಾಕಿದ್ದರೆ ಸ್ವಲ್ಪ ತಡೀರಿ. ಬೆಂಗಳೂರಲ್ಲಂತೂ ಸಿಕ್ಕಾಪಟೆ ಟೈಟ್​ ಮಾರ್ಗಸೂಚಿಯನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ಅದರ ಸಂಪೂರ್ಣ ಮಾಹಿತಿಯನ್ನು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಡಿ.31ರ ರಾತ್ರಿ ಎಂಜಿ‌ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಮ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆಗಳಲ್ಲಿ ರಾತ್ರಿ 8ರಿಂದ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧವಾಗುತ್ತದೆ. ಇಲ್ಲಿನ ಹೋಟೆಲ್, ರೆಸ್ಟೋರೆಂಟ್, ಪಬ್​​ಗಳಿಗೆ ಯಾರಾದರೂ ಬರಬೇಕಾದರೆ ಮೊದಲೇ ಬುಕ್ಕಿಂಗ್ ಮಾಡಿರಬೇಕು. ಆ ಬುಕ್ಕಿಂಗ್ ದಾಖಲೆಗಳನ್ನು ಚೆಕ್​ಪೋಸ್ಟ್​ನಲ್ಲಿರುವ ಪೊಲೀಸರು ಪರಿಶೀಲಿಸಿ, ಅವರು ಹೋಗಬೇಕಾದ ರೆಸ್ಟೋರೆಂಟ್​, ಹೋಟೆಲ್​ಗಳಿಗೆ ನಡೆದುಕೊಂಡು ಹೋಗಲು ಅನುವು ಮಾಡಿಕೊಡುತ್ತಾರೆ ಎಂದು ರವಿಕಾಂತೇಗೌಡ ಹೇಳಿದರು.

ನಗರದಾದ್ಯಂತ ಸಂಚಾರ ವಿಭಾಗದಿಂದ 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆ, ಕಾನೂನು ಸುವ್ಯವಸ್ಥೆಗಾಗಿ ನೇಮಕ ಮಾಡಲಾಗುತ್ತದೆ. ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ಎಲ್ಲ ಫ್ಲೈಓವರ್​ಗಳನ್ನೂ (ಮೇಲ್ಸೇತುವೆ) ಮುಚ್ಚಲಾಗುತ್ತದೆ. ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡುವಂತಿಲ್ಲ. ಈಗ ಕೊವಿಡ್​ ಇರೋದ್ರಿಂದ ಹೇಗೂ ಪೊಲೀಸರು ಮದ್ಯ ಸೇವನೆ ತಪಾಸಣೆ ಮಾಡೋದಿಲ್ಲ ಎಂದು ಭಾವಿಸುವುದು ಬೇಡ. 191 ಪಾಯಿಂಟ್​ಗಳಲ್ಲಿ ಪಿಕ್​ಅಪ್​ ಸ್ಕ್ವಾಡ್​ಗಳನ್ನು ನೇಮಕ ಮಾಡಲಾಗಿದ್ದು, ಡ್ರಿಂಕ್​ ಆ್ಯಂಡ್ ಡ್ರೈವ್​ ತಪಾಸಣೆಗೆ ರಕ್ತದ ಮಾದರಿ ತೆಗೆದುಕೊಳ್ಳಲಾಗುವುದು. ಒಮ್ಮೆ ರಕ್ತಪರೀಕ್ಷೆಯಲ್ಲಿ ಕುಡಿದು ಗಾಡಿ ಓಡಿಸಿದ್ದು ಸಾಬೀತಾದರೆ, ಅಂಥವರ ವಿರುದ್ಧ ಸಿಆರ್​ಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಡ್ರೈವಿಂಗ್​ ಲೈಸನ್ಸ್​ ರದ್ದು ಮಾಡಲಾಗುವುದು ಎಂದು ತಿಳಿಸಿದರು.

ನಗರದ 44 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ 668 ಸೆಕ್ಟರ್​ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ನೈಸ್​ ರಸ್ತೆಯಲ್ಲೂ ಸಹ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಹೊರವಲಯದಲ್ಲಿರುವ ಮೇಲ್ಸೇತುವೆಗಳೂ ಮುಚ್ಚಿರುತ್ತವೆ. ಸಂಚಾರ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ಕಠಿಣ ಕ್ರಮ ನಿಶ್ಚಿತ ಎಂದು ರವಿಕಾಂತೇ ಗೌಡ ತಿಳಿಸಿದ್ದಾರೆ.