ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದ ಬಲಿಷ್ಠ ಸಮಾಜಗಳು 2ಎ ಮೀಸಲಾತಿ ಕೇಳುತ್ತಿವೆ. ಮೀಸಲಾತಿ ನೀಡಲು ಸರ್ಕಾರ ಕೂಡ ಆಸಕ್ತಿ ತೋರುತ್ತಿದೆ. ಆದರೆ, ಬಲಿಷ್ಠ ಸಮುದಾಯಗಳಿಗೆ 2ಎ ಮೀಸಲಾತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಪತ್ರ ಬರೆದಿದೆ. ಹಿಂದುಳಿದ ಆಯೋಗದ ಅಧಿನಿಯಮ 1995 ಪ್ರಕಾರ ಎಲ್ಲಾ ವೈಜ್ಞಾನಿಕ ವಿಧಿ ವಿಧಾನಗಳನ್ನು ಅನುಸರಿಸದೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬಲಿಷ್ಠ ಜಾತಿಯನ್ನು ಸೇರಿಸುವುದು ಸಾಮಾಜಿಕ ನ್ಯಾಯಕ್ಕೆ ಹಾಗೂ ಭಾರತ ಸಂವಿಧಾನಕ್ಕೆ ಬಗೆಯುವ ಅನ್ಯಾಯ. ಈಗಾಗಲೇ 2ಎನಲ್ಲಿ 102 ಜಾತಿಗಳಿದ್ದು, ಕೇವಲ ಶೇ.15 ಮೀಸಲಾತಿ ಇದೆ. ಇದರ ಜತೆಗೆ 3ಎ/3ಬಿ ಮೀಸಲಾತಿ ಪಟ್ಟಿಯಲ್ಲಿರುವ ಕೆಲವು ಸಮುದಾಯದವರು 2ಎ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ವೈಜ್ಞಾನಿಕ ವಿಧಾನಗಳನ್ನು ಅನುಸರಿಸದೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬಲಿಷ್ಠ ಜಾತಿಯವರನ್ನು ಸೇರಿಸುವುದು ತಪ್ಪು. ಹೀಗಾಗಿ, ಅವರ ಹಿಂದುಳಿದುವಿಕೆ ಬಗ್ಗೆ ಅಧ್ಯಯನ ನಡೆಸಿ ಸಂವಿಧಾನ 15, 16 ಹಾಗೂ 340ನೇ ವಿಧಿಗಳಿಗನುಸಾರ ಅರ್ಹರಾಗಿರುವವರಿಗೆ ಮಾತ್ರ ಮೀಸಲಾತಿ ನೀಡಬೇಕು. ಈ ಮೂಲಕ ಮುಂದಾಗುವ ಅಸಮತೋಲನವನ್ನು ತಪ್ಪಿಸಬೇಕು. ಜತೆಗೆ 2ಎ ಮೀಸಲಾತಿ ಕೇಳುತ್ತಿರುವವರ ಬಳಿ ಎಲ್ಲಾ ವರದಿಗಳನ್ನು ಪಡೆಯದೆ ಅವರನ್ನು ಈ 2ಎ ವರ್ಗಕ್ಕೆ ಸೇರ್ಪಡೆ ಮಾಡಬಾರದು ಎಂದು ಕೋರಿದ್ದಾರೆ.
ಏಕೆ ಈ ಪತ್ರ
ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಪಾದಯಾತ್ರೆ ಹಾಗೂ ಸಮಾವೇಶ ಕೂಡ ನಡೆಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಈ ಆಗ್ರಹ ಕೇಳಿ ಬಂದಿದೆ.
ಇದನ್ನೂ ಓದಿ: ಸದ್ಯಕ್ಕೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ: ಸಚಿವರುಗಳ ಸ್ಪಷ್ಟನೆ