ಬೆಂಗಳೂರು: ಬೆಂಗಳೂರು ವಿವಿಯ ಕುಲಪತಿ ಧೋರಣೆ ಖಂಡಿಸಿ ವಿವಿಯ ಎಲ್ಲ ವಿಭಾಗ ಬಂದ್ ಮಾಡಿ ಇಂದು ಬೆಳಿಗ್ಗೆ 11ಗಂಟೆಗೆ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳ ಸಮೂಹ ಮುಂದಾಗಿದೆ. ಇಂದು ನಡೆಯುವ ಪ್ರತಿಭಟನೆಯಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಭಾಗಿಯಾಗುವ ಸಾಧ್ಯತೆ ಇದೆ. 2018ರಿಂದಲೂ PhD ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದ್ರೆ 2 ವರ್ಷವಾದರೂ ಪ್ರವೇಶಾತಿ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಪಿಹೆಚ್‌ಡಿ ಪ್ರವೇಶಾತಿ ಅಕ್ರಮ ಖಂಡಿಸಿ ಇಂದು ಪ್ರತಿಭಟನೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವಿವಿ ಕುಲಪತಿ ವೇಣುಗೋಪಾಲ್ ಧೋರಣೆ ಖಂಡಿಸಿ ಧರಣಿ ನಡೆಸಲಿದ್ದಾರೆ.
ರಾಜ್ಯದ ಯಾವುದೇ ವಿವಿಗಳಲ್ಲಿ ಅನುಸರಿಸದ ಅವೈಜ್ಞಾನಿಕ ಪದ್ದತಿಯನ್ನು ಅನುಸರಿಸಿ ಕೌನ್ಸಿಲಿಂಗ್ ನಡೆಸುತ್ತಿದೆ. ಮೀಸಲಾತಿ ವಿನಾಯ್ತಿಯ ನಿಯಮಗಳನ್ನು ಉಲ್ಲಂಘಿಸಿ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸಾಮಾನ್ಯವಾಗಿ ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ 55%, ಹಿಂದುಳಿದ ವರ್ಗಗಳಿಗೆ 50% ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ 45% ಅರ್ಹತಾ ಅಂಕಗಳನ್ನು ನಿಗದಿಪಡಿಸಬೇಕು. ಆದರೆ ಬೆಂಗಳೂರು ವಿವಿಯಲ್ಲಿ ಯಾವುದೇ ವಿನಾಯ್ತಿ ನೀಡದೆ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನಿವೃತ್ತಿಗೆ 6 ತಿಂಗಳು ಬಾಕಿ ಇರುವ ಪ್ರಾಧ್ಯಾಪಕರಿಗೆ ಪಿಹೆಚ್‌ಡಿ ಮಾರ್ಗದರ್ಶನ ನೀಡಲು ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಿಹೆಚ್‌ಡಿ ಆಸೆಗೆ ಎಳ್ಳುನೀರು ಬಿಟ್ಟಂತಾಗಿದೆ. 2016ರಿಂದ ಪಿಎಚ್ ಡಿ ಪ್ರವೇಶಾತಿ ಪ್ರಕ್ರಿಯೆ ನಡೆದಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಶಿಫಾರಸ್ಸುಗಳಲ್ಲಿ ಅಂತರಶಿಸ್ತೀಯ ಸಂಶೋಧನಾ (ಇಂಟರ್ ಡಿಸಿಪ್ಲಿನರಿ ರಿಸರ್ಚ್) ಗಳಿಗೆ ಅವಕಾಶ ನಿರಾಕರಿಸಲಾಗಿದೆ. ಈ ಹಿಂದೆ ಬೆಂಗಳೂರು ವಿವಿಯಲ್ಲಿ ಅತೀ ಹೆಚ್ಚು ಅಂತರಶಿಸ್ತೀಯ ಸಂಶೋಧನೆಗಳನ್ನು ಮಂಡಿಸಿ ದಾಖಲೆ ಬರೆದಿತ್ತು. ಆದರೆ ಈ ಬಾರಿ ವಿವಿಯಲ್ಲಿ ಇಂಟರ್ ಡಿಸಿಪ್ಲಿನರಿ ರಿಸರ್ಚ್ ಗಳಿಗೆ ಅವಕಾಶ ನಿರಾಕರಿಸಲಾಗಿದೆ. ಕಳೆದ 5 ವರ್ಷಗಳಿಂದ ಪಿಹೆಚ್‌ಡಿ ಪ್ರಕ್ರಿಯೆ ನಡೆಸದ ಹಿನ್ನೆಲೆಯಲ್ಲಿ ಸಹಾಯಕ, ಸಹ ಹಾಗೂ ಪ್ರಾಧ್ಯಾಪಕರಿಗೆ ತಲಾ ಒಂದು ಸೀಟ್ ಹೆಚ್ಚುವರಿ ಮಾಡಲು ಒತ್ತಾಯಿಸಲಾಗಿದೆ. ಬೇಡಿಕೆಗಳು ಈಡೇರಿಸದಿದ್ದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು IISC ಸಂಸ್ಥೆಯಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ಸಾವು