ಯಾದಗಿರಿ: ಜಿಲ್ಲೆಯಲ್ಲಿ ಏಕೈಕ ಸಕ್ಕರೆ ಕಾರ್ಖಾನೆ ಇದೆ. ಸಕ್ಕರೆ ಕಾರ್ಖಾನೆಗೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ರೈತರು ಕಬ್ಬು ಮಾರಾಟ ಮಾಡುತ್ತಾರೆ. ಆದರೆ ಕಬ್ಬು ಖರೀದಿ ಮಾಡಿದ ಕಾರ್ಖಾನೆ ರೈತರಿಗೆ ಬಾಕಿ ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದ್ದು, ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ ರೈತರಿಗೆ ಫ್ಯಾಕ್ಟರಿ ಮಾಲೀಕರು ಇನ್ನಷ್ಟು ತೊಂದರೆಗೆ ಸಿಲಕುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಭೀಮಾ ನದಿ ಪ್ರವಾಹ ಮತ್ತು ಅಕಾಲಿಕ ಮಳೆಗೆ ಹೈರಾಣಾಗಿರುವ ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಭಾಗದ ರೈತರಿಗೆ ಮತ್ತೊಂದು ಕಂಟಕ ಎದುರಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಬಳಿ ಇರುವ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆ. ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ರೈತರಿಗೆ ಬಾಕಿ ಹಣ ನೀಡಲು ಸತಾಯಿಸುತ್ತಿದ್ದು, ಮಾಡಿದ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ರೈತರು ಕಂಗಾಲಾಗಿದ್ದಾರೆ. ರೈತರಿಂದ ಈಗಾಗಲೇ ಕಬ್ಬು ಖರೀದಿಸಿ ಅದನ್ನು ಸಕ್ಕರೆ ರೂಪದಲ್ಲಿ ಮಾರಾಟ ಮಾಡಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಣ ನೀಡಲು ಬಾಕಿಯಿದ್ದರೂ, ಕಳ್ಳ ಬೆಕ್ಕಿನಂತೆ ಜಾಗ ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಯಾದಗಿರಿ, ರಾಯಚೂರ ಹಾಗೂ ಕಲಬುರ್ಗಿ ಜಿಲ್ಲೆಯ ರೈತರು ಈ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡುತ್ತಿದ್ದಾರೆ. ಆದರೆ ಕಳೆದ ವರ್ಷ ರೈತರು ನೀಡಿರುವ ಕಬ್ಬಿನ ಬಾಕಿ ಬಿಲ್ ನೀಡಲು ಫ್ಯಾಕ್ಟರಿ ಮಾಲೀಕರು ಮಾತ್ರ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಸಾಲ ಮಾಡಿ ಕಬ್ಬು ಬೆಳೆದ ರೈತರು ಅಕ್ಷರಶಃ ಕಂಗಾಲಾಗುವಂತಾಗಿದೆ. ರೈತರು ಕಬ್ಬಿನ ಬಿಲ್ ಬಂದ ಕೂಡಲೆ ಮಾಡಿದ ಸಾಲವನ್ನ ತೀರಿಸಬೇಕು ಅಂತಾ ಮೊದಲೇ ತೀರ್ಮಾನ ಕೂಡ ಮಾಡಿದ್ದರು. ಆದರೆ ಫ್ಯಾಕ್ಟರಿ ಮಾಲೀಕರು ಬಾಕಿ ಹಣ ನೀಡದೆ ರೈತರಿಗೆ ಸುಖಾಸುಮ್ಮನೆ ಸತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
28 ಕೋಟಿ ರೂ. ಹಣವನ್ನು ಉಳಿಸಿಕೊಂಡ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ
ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ರೈತರ ಸುಮಾರು 28 ಕೋಟಿ ರೂ. ಹಣವನ್ನು ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಉಳಿಸಿಕೊಂಡಿದೆ. ಪ್ರವಾಹ ಮತ್ತು ಅಕಾಲಿಕ ಮಳೆ ಕಾಟದ ನಡವೆಯೂ ರೈತರು ಸಾಲ ಮಾಡಿ ಕಬ್ಬು ಬೆಳೆದಿದ್ದು, ಅದನ್ನು ಕೋರ್ ಗ್ರೀನ್ ಫ್ಯಾಕ್ಟರಿಗೆ ಮಾರಾಟ ಮಾಡಿದ್ದರು. ಕಬ್ಬು ಮಾರಾಟ ಮಾಡಿ ಐದಾರು ತಿಂಗಳು ಕಳೆದಿವೆ. ಇನ್ನು ಕೂಡ ಬಾಕಿ ಹಣ ರೈತರ ಕೈ ಸೇರಿಲ್ಲ. ಅಲ್ಲದೆ ಸದ್ಯ ಕಬ್ಬಿನ ವ್ಯವಸಾಯ ಮುಗಿದಿದ್ದು, ತಾತ್ಕಾಲಿಕವಾಗಿ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ. ಮತ್ತೆ ಮುಂದಿನ ವರ್ಷ ಕಬ್ಬಿನ ಸೀಜನ್ನಲ್ಲಿ ಓಪನ್ ಮಾಡುತ್ತಾರೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ರೈತರಿಗೆ ಸಾಲಗಾರರ ಕಾಟ ಜಾಸ್ತಿಯಾಗಿದ್ದು, ಏನು ಮಾಡಬೇಕೆಂಬ ಚಿಂತನೆಯಲ್ಲಿದ್ದಾರೆ ಕಬ್ಬು ಬೆಳೆದ ರೈತರು. ಇನ್ನು ಸರ್ಕಾರದ ನಿಯಮದ ಪ್ರಕಾರ ಕಾರ್ಖಾನೆಗೆ ರೈತರು ಕಬ್ಬು ನೀಡಿದ 15 ದಿನಗಳಲ್ಲಿ ರೈತರ ಕೈಗೆ ಹಣ ಸಿಗಬೇಕು. ಆದರೆ ಫ್ಯಾಕ್ಟರಿ ಮಾಲೀಕರು ರೈತರು ಕಬ್ಬು ನೀಡಿ ಐದಾರು ತಿಂಗಳುಗಳು ಕಳೆಯುತ್ತ ಬಂದರು ಬಾಕಿ ಹಣ ನೀಡಿಲ್ಲ.
ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಟಾರ್ಗೆಟ್ 3 ಲಕ್ಷ ಕ್ವಿಂಟಲ್ ಇದೆ. ಆದರೆ ಈ ಬಾರಿ 6 ಲಕ್ಷ ಕ್ವಿಂಟಲ್ ಕಬ್ಬನ್ನು ಖರೀದಿ ಮಾಡಲಾಗಿದೆ. ಫ್ಯಾಕ್ಟರಿ ಕಳೆದ ಬಾರಿ ಇದೇ ರೀತಿ ಬಾಕಿ ಹಣ ಉಳಿಸಿಕೊಂಡ ಪರಿಣಾಮ, ಫ್ಯಾಕ್ಟರಿ ಸೀಜ್ ಮಾಡಿ ರೈತರಿಗೆ ಕಬ್ಬು ಬಾಕಿ ನೀಡುವಲ್ಲಿ ಜಿಲ್ಲಾಡಳಿತ ಮುಂದಾಗಿತ್ತು. ಇಷ್ಟಾಗಿದ್ದರು ಬುದ್ಧಿ ಕಲಿಯದ ಫ್ಯಾಕ್ಟರಿ ಮಾಲೀಕರು ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಇನ್ನು ಈ ಬಗ್ಗೆ ವಡಗೇರ ತಹಶೀಲ್ದಾರರಾದ ಸುರೇಶ್ ಅಂಕಲಗಿ ಅವರಿಗೆ ಕೇಳಿದರೆ ಬಾಕಿ ಹಣವನ್ನ ಆದಷ್ಟು ಬೇಗ ರೈತರಿಗೆ ಕೊಡಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ.
ಶುಗರ್ ಫ್ಯಾಕ್ಟರಿ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದು, ಇದರಿಂದಾಗಿ ರೈತರು ತಾಳ್ಮೆ ಕಳೆದುಕೊಂಡಿದ್ದಾರೆ. ಫ್ಯಾಕ್ಟರಿ ವಿರುದ್ಧ ಕಾನೂನು ಹೋರಾಟಕ್ಕೆ ತಯಾರಿ ನಡೆಸಿರುವ ರೈತರು, ಮಾಲೀಕರ ವಿರುದ್ಧ ವಡಗೇರಾ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
ಹಾಸನ ರೈತರು, ನಟ ಯಶ್ ಕುಟುಂಬಸ್ಥರ ನಡುವಿನ ವಿವಾದ ಇತ್ಯರ್ಥ
ಲಾಕ್ಡೌನ್ನಲ್ಲಿ ಬಾಳೆ ಬೆಳೆದು 8 ಲಕ್ಷ ನಷ್ಟ; ಛಲ ಬಿಡದೇ ದ್ರಾಕ್ಷಿ ಬೆಳೆದು ಸ್ಪೂರ್ತಿಯಾದ ಯಾದಗಿರಿಯ ಯುವ ರೈತ