Muslim Reservation: ಮುಸ್ಲಿಮರ 2ಬಿ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

|

Updated on: Apr 25, 2023 | 12:21 PM

ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

Muslim Reservation: ಮುಸ್ಲಿಮರ 2ಬಿ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್
Follow us on

ನವದೆಹಲಿ/ಬೆಂಗಳೂರು: ಮುಸ್ಲಿಂರ 2ಬಿ ಮೀಸಲಾತಿಯನ್ನು (Muslim 2B Reservation) ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ (Karnataka Government) ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.  ಇನ್ನು ಸುಪ್ರೀಂ ಕೋರ್ಟ್​​ನ ಈ ತಡೆಯಾಜ್ಞೆಯಿಂದ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಮೀಸಲಾತಿ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಏಕೆಂದರೆ ಸರಿಯಾಗಿ ಒಂದು ತಿಂಗಳ ಹಿಂದೆ (ಮಾ.24) ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು. ಈ ವೇಳೆ ಅನೇಕ ವಿಚಾರಗಳನ್ನು ಚರ್ಚಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿ ಪ್ರಬಲ ಎರಡು ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡುವ ವಿಚಾರವಾಗಿ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗಿದ್ದ ಶೇ4 ರಷ್ಟು ಮೀಸಲಾತಿಯನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಶೇ 2ರಂತೆ ಸಮವಾಗಿ ಹಂಚಲಾಗಿತ್ತು. ನಂತರ ಮುಸ್ಲಿಮರನ್ನು ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಿ, 2ಬಿಯನ್ನು ರದ್ದುಗೊಳಿಸಿತ್ತು.

ಅಂದು ಸಂಪುಟದಲ್ಲಿ ಆದ ನಿರ್ಧಾರವೇನು

ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ಮುಸ್ಲಿಮರ 2ಬಿ ಮೀಸಲಾತಿ ರದ್ದು, ಒಕ್ಕಲಿಗ, ಲಿಂಗಾಯತರಿಗೆ ಹೆಚ್ಚಳ; ಸಿಎಂ ಬೊಮ್ಮಾಯಿ ಘೋಷಣೆ

ಪತ್ರಿಕಾಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದೇನು

ಅದೇ ರೀತಿ 2ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದ(EWS) ಅಡಿಯಲ್ಲಿ ಮೀಸಲಾತಿ ನೀಡಲಾಗುವುದು. ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದು ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಕರ್ನಾಟಕದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್

ಕರ್ನಾಟಕ ಸರ್ಕಾರದ ವಿವಾದಾತ್ಮಕ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ನಡೆಯು “ಖಂಡಿತವಾಗಿಯೂ ತರ್ಕಬದ್ಧವಲ್ಲದ ಗ್ರಹಿಕೆ”ಯ ಆಧಾರದ ಮೇಲ್ನೋಟದ ನಡೆ ಎಂದು ಅದು ಹೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Tue, 25 April 23