ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ಪಡೆದ ಆರೋಪ: ಹುಲಿಗೆಮ್ಮ ದೇವಸ್ಥಾನಕ್ಕೆ ಬಂದು ಆಣೆ ಮಾಡುವಂತೆ ಸಂಸದ ಸಂಗಣ್ಣ ಕರಡಿ ಸವಾಲ್
ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ ಲೂಟಿಕೋರ. ಜನರ ಹಣ ಕೊಳ್ಳೆ ಹೊಡೆದು ಏಲೆಕ್ಷನ್ ಮಾಡ್ತಿದ್ದಾನೆ. ಜನರ ಹಣ ಕೊಳ್ಳೆ ಹೊಡೆದು ಸಾವಿರ ಕೋಟಿ ದುಡ್ಡು ಮಾಡಿದ್ದಾನೆ ಎಂದು ಸಂಗಣ್ಣ ಕರಡಿಯವರು ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ನಡುವೆ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಟಾಕ್ ವಾರ್ ಶುರುವಾಗಿದೆ. ಒಪ್ಪಂದ ರಾಜಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕೊಪ್ಪಳದಲ್ಲಿ ಈ ಬಾರಿ ಬ್ಲಾಕ್ ಮೇಲರ್- ವಂಚಕ, ಲೂಟಿಕೋರ- ಭ್ರಷ್ಟ ಎಂಬ ಪದಗಳು ಸದ್ದು ಮಾಡುತ್ತಿವೆ. ಜೆಡಿಎಸ್ ಅಭ್ಯರ್ಥಿ ಲೂಟಿಕೋರ, ಜನರ ಹಣ ಕೊಳ್ಳೆ ಹೊಡೆದು ಏಲೆಕ್ಷನ್ ಮಾಡ್ತಿದ್ದಾನೆ ಎಂದು ಸಂಸದ ಸಂಗಣ್ಣ ಕರಡಿಯವರು ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕಳೆದ 2018ರ ಚುನಾವಣೆಯಂತೆಯೇ ಈ ಬಾರಿಯೂ ಕೊನೆ ಕ್ಷಣದಲ್ಲಿ ಬಿಜೆಪಿ ಬಿ ಫಾರಂ ವಂಚಿತ ಸಿ.ವಿ.ಚಂದ್ರಶೇಖರ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಸಂಸದ ಸಂಗಣ್ಣ ಕರಡಿ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಿ, ಸೊಸೆಗೆ ಟಿಕೇಟ್ ತಂದಿದ್ದಾರೆ. ಸ್ವಾರ್ಥ ರಾಜಕಾರಣಕ್ಕೆ ಹೆಸರಾಗಿರುವ ಸಂಸದ ಸಂಗಣ್ಣ ಕರಡಿ ವಿರೋಧ ಪಕ್ಷದ ಹಿಟ್ನಾಳ ಕುಟುಂಬದ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿ.ವಿ.ಚಂದ್ರಶೇಖರ್ ನಾಮಪತ್ರ ಸಲ್ಲಿಕೆ ಮಾಡಿದ್ದ ದಿನವೇ ವಾಗ್ದಾಳಿ ನಡೆಸಿದ್ದರು. ಚಂದ್ರಶೇಖರ್ ಹೇಳಿಕೆಗೆ ಕೆಂಡವಾಗಿದ್ದ ಸಂಗಣ್ಣ ಕರಡಿ ಅವರು ಪ್ರಚಾರ ಸಭೆಯಲ್ಲಿ ಸಿವಿಸಿ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ ಲೂಟಿಕೋರ. ಜನರ ಹಣ ಕೊಳ್ಳೆ ಹೊಡೆದು ಏಲೆಕ್ಷನ್ ಮಾಡ್ತಿದ್ದಾನೆ. ಜನರ ಹಣ ಕೊಳ್ಳೆ ಹೊಡೆದು ಸಾವಿರ ಕೋಟಿ ದುಡ್ಡು ಮಾಡಿದ್ದಾನೆ. ಸರ್ಕಾರಿ ನೌಕರನಾಗಿ ಇಷ್ಟು ದುಡ್ಡು ಮಾಡೋಕೆ ಹೇಗೆ ಸಾಧ್ಯ ಎಂದು ತಿರಿಗೇಟು ನೀಡಿದ್ದಾರೆ.
ನಂಗೆ ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ತಂದಿದ್ದೇನೆ ಎನ್ನುತ್ತಿರುವು ಸಿವಿಸಿ, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದು ಆಣೆ ಮಾಡುವ ಮೂಲಕ ಸಾಬೀತು ಮಾಡಲಿ ಎಂದು ಸಂಗಣ್ಣ ಕರಡಿ ಸವಾಲ್ ಹಾಕಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:22 am, Tue, 25 April 23