ಕಾವೇರಿ ನದಿ ನೀರು ವಿವಾದ: ಕರ್ನಾಟಕಕ್ಕಿಂದು ಮಹತ್ವದ ದಿನ, ರೈತರಲ್ಲಿ ಟೆನ್ಷನ್

| Updated By: ರಮೇಶ್ ಬಿ. ಜವಳಗೇರಾ

Updated on: Sep 21, 2023 | 8:17 AM

Cauvery River Water Dispute: ಕಾವೇರಿ ನದಿ ನೀರು ಕಿಚ್ಚು ನವದೆಹಲಿಯಲ್ಲಿ ಜೋರಾಗಿದೆ. ತಮಿಳುನಾಡು ಕ್ಯಾತೆಗೆ ಕೌಂಟರ್​ ಕೊಡಲು ಕರ್ನಾಟಕ ಸರ್ಕಾರ ದಿಲ್ಲಿಯಲ್ಲಿ ಸರ್ಕಸ್ ನಡೆಸಿದ್ದು, ಅದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇಂದು(ಸೆಪ್ಟೆಂಬರ್ 21) ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಗೆ ಸಮಯ ನಿಗದಿಯಾಗಿದೆ. ಮತ್ತೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿವಾದದ ಕುರಿತು ಅರ್ಜಿ ವಿಚಾರಣೆ ನಡೆಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ.

ಕಾವೇರಿ ನದಿ ನೀರು ವಿವಾದ: ಕರ್ನಾಟಕಕ್ಕಿಂದು ಮಹತ್ವದ ದಿನ, ರೈತರಲ್ಲಿ ಟೆನ್ಷನ್
ಸುಪ್ರೀಂ ಕೋರ್ಟ್
Follow us on

ನವದೆಹಲಿ.ಬೆಂಗಳೂರು, (ಸೆಪ್ಟೆಂಬರ್ 21): ಕಾವೇರಿ ನದಿ ನೀರು ಹಂಚಿಕೆ ವಿವಾದ(Cauvery River Water Dispute) ಕ್ಲೈಮ್ಯಾಕ್ಸ್‌ ಘಟ್ಟಕ್ಕೆ ತಲುಪಿದೆ. ಇಂದು(ಸೆಪ್ಟೆಂಬರ್ 21) ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಗೆ ಸಮಯ ನಿಗದಿಯಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಗಜೇಂದ್ರ ಸಿಂಗ್ ಅವರನ್ನು ಸಿದ್ದರಾಮಯ್ಯ(Siddaramaiah), ಡಿಕೆ ಶಿವಕುಮಾರ್(DK Shivakumar) ಸೇರಿದಂತೆ ರಾಜ್ಯ ಸಂಸದರು ಭೇಟಿಯಾಗಲಿದ್ದು, ಕಾವೇರಿ ನದಿ ನೀರಿನ ವಾಸ್ತವ ಸ್ಥಿತಿ ಬಗ್ಗೆ ಚರ್ಚಿಸಲಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿವಾದದ ಕುರಿತು ಅರ್ಜಿ ವಿಚಾರಣೆ ನಡೆಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ವಸ್ತುಸ್ಥಿತಿಯನ್ನು ಮಂದಿಟ್ಟು, ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಳಗ್ಗೆ 10:30ಕ್ಕೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯಲಿದೆ. ಇದರ ನಡುವೆ ಕಾವೇರಿ ನೀರಿಗಾಗಿ ರಾಜ್ಯರೈತರ ಪರವಾಗಿ ಸುಪ್ರೀಂಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಕೆಂಪರಾಜು ಮತ್ತು ಆರ್.ಪಿ.ರವಿ ಎಂಬುವರು ರಾಜ್ಯದ ರೈತರ ಪರವಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲ್ಲಿಸಿರುವ ಅರ್ಜಿಯ ಜತೆಗೆ ರೈತರ ಅರ್ಜಿಯನ್ನು ಸಹ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳು ಖಾಲಿ-ಖಾಲಿ: ಇಲ್ಲಿದೆ ಸೆ.21ರ ಡ್ಯಾಂಗಳ ನೀರಿನ ಮಟ್ಟ

ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದ ಕರ್ನಾಟಕ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಮುಂದೇನು ಮಾಡಬೇಕು ಅಂತಾ ಚರ್ಚಿಸುವ ನಿಟ್ಟಿನಲ್ಲಿ ನಿನ್ನೆ(ಸೆ.20) ದೆಹಲಿ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಕೇಂದ್ರ ಸಚಿವರು ಹಾಗೂ ಎಲ್ಲ ಸಂಸದರ ಜತೆ ಸಭೆ ನಡೆಸಿದ್ರು. ಈ ಸಭೆಯಲ್ಲಿ ಕಾವೇರಿ ವಿಚಾರಾಗೇ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಾಧಿಕಾರದ ನಿರ್ಧಾರದಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕಿದೆ. ಈ ಹಿನ್ನೆಲೆ‌ ಕೇಂದ್ರ ಸಚಿವರು ಮತ್ತು ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಭೇಟಿಗೆ ಸಮಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು.

ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಇಂದು ಸಮಯ ನಿಗದಿ

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಗೆ ಸಮಯ ನಿಗದಿಯಾಗಿದೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಮುಖ್ಯಮಂತ್ರಿ ಮತ್ತು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ಆಗಿರುವ ಡಿ.ಕೆ.ಶಿವಕುಮಾರ್ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಆದ್ರೆ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂದು ಡಿಸಿಎಂ ಡಿ.ಕೆ,ಶಿವಕುಮಾರ್ ಬೇಸರ ಹೊರಹಾಕಿದ್ದಾರೆ.

ಇದೆಲ್ಲದ ನಡುವೆ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ರೈತರ ಪ್ರತಿಭಟನೆಗಳು ಮುಂದುವರಿದಿದೆ. ಒಟ್ಟಾರೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿಚಾರ ಏನಾಗಲಿದೆ. ರಾಜ್ಯದ ರೈತರಿಗೆ ನ್ಯಾಯ ಸಿಗುತ್ತಾ ಇಲ್ವಾ ಎನ್ನುವ ಟೆನ್ಷನ್ ಶುರುವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 am, Thu, 21 September 23