ಹುಬ್ಬಳ್ಳಿಯಲ್ಲಿ ಹೊಸ ಪ್ರಯೋಗ: ಕಸ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ

| Updated By: Digi Tech Desk

Updated on: Feb 08, 2022 | 5:05 PM

ಈ ಮಿನಿ ವಾಹನ ಅಭಿವೃದ್ಧಿಯಿಂದಾಗಿ ಯಾರೂ ಕೂಡ ಈಗ ಕಸವ‌ನ್ನು ಕೈಯಲ್ಲಿ ಮುಟ್ಟುವ ಹಾಗೆ ಇಲ್ಲ. ಏಕೆಂದರೆ ತ್ಯಾಜ್ಯ ಸಂಗ್ರಹಿಸಲು ಈ ಹೊಸ ತಂತ್ರಜ್ಞಾನದ ವಾಹನವನ್ನು ಬಳಸುತ್ತಿದ್ದು, ಇದು ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಂಡು ಹೋಗುತ್ತದೆ.

ಹುಬ್ಬಳ್ಳಿಯಲ್ಲಿ ಹೊಸ ಪ್ರಯೋಗ: ಕಸ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ
ಸ್ವಚ್ಛ-ಸ್ವಸ್ಥ ಟ್ರಸ್ಟ್‌ ಮಿನಿ ವಾಹನ
Follow us on

ಧಾರವಾಡ: ಕಸ ವಿಲೇವಾರಿ ಎನ್ನುವುದು ದೇಶದಲ್ಲಿರುವ ದೊಡ್ಡ ಸಮಸ್ಯೆ. ಇದಕ್ಕಾಗಿ ನಾನಾ ತಂತ್ರಜ್ಞಾನ ಬಳಕೆಯಾಗುತ್ತಿದ್ದರೂ, ಪೌರಕಾರ್ಮಿಕರ ಪಾಲಿಗೆ ಅದು ಇಂದಿಗೂ ಹೊರೆಯಾಗಿಯೇ ಉಳಿದಿದೆ. ಸ್ವಚ್ಛ ಮಾಡುವ ವ್ಯಕ್ತಿಗೆ ಕಸ ತೆಗೆಯಲು ವಾಕರಿಕೆಯಾಗದಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸದ್ಯ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಮುಂದುವರಿದ ದೇಶಗಳ ತಂತ್ರಜ್ಞಾನವನ್ನು ಕೈಗೆಟುಕುವಂತೆ ಅಭಿವೃದ್ಧಿ ಪಡಿಸಿದ್ದಾರೆ. ಸ್ವಚ್ಛ-ಸ್ವಸ್ಥ ಟ್ರಸ್ಟ್‌ನ ಈ ಮಿನಿ ವಾಹನವನ್ನು ಸದ್ಯ ಕಸದ ವಿಲೇವಾರಿಗಾಗಿ ಅಭಿವೃದ್ಧಿಪಡಿಸಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರ, ಆದರ್ಶ ನಗರದಲ್ಲಿರುವ ವಿಶ್ವನಾಥ ಕಲ್ಯಾಣ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿ ನಿತ್ಯ ಸಂಚಾರ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದೆ. ಈ ಒಂದೇ ವಾಹನ ಹಲವಾರು ಬಡಾವಣೆಗಳ ಕಸವನ್ನು ಸ್ಮಾರ್ಟ್ ಆಗಿ ವಿಲೇವಾರಿ ಮಾಡುತ್ತಿದೆ. ಹೀಗಾಗಿಯೇ ಹೊಸ ತಂತ್ರಜ್ಞಾನದ ಈ ವಾಹನವನ್ನ ಮಹಾನಗರದ ಜನತೆ ಕುತೂಹಲದಿಂದ ಗಮನಿಸುತ್ತಿದ್ದಾರೆ.

ಈ ಮಿನಿ ವಾಹನ ಅಭಿವೃದ್ಧಿಯಿಂದಾಗಿ ಯಾರೂ ಕೂಡ ಈಗ ಕಸವ‌ನ್ನು ಕೈಯಲ್ಲಿ ಮುಟ್ಟುವ ಹಾಗೆ ಇಲ್ಲ. ಏಕೆಂದರೆ ತ್ಯಾಜ್ಯ ಸಂಗ್ರಹಿಸಲು ಈ ಹೊಸ ತಂತ್ರಜ್ಞಾನದ ವಾಹನವನ್ನು ಬಳಸುತ್ತಿದ್ದು, ಇದು ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಂಡು ಹೋಗುತ್ತದೆ. ಈ ವಾಹನಕ್ಕೆ ಅಳವಡಿಸಲಾದ ಮಷೀನ್‌ನ ಸಹಾಯದಿಂದ ಈ ಅಂಡರ್‌ಗ್ರೌಂಡ್‌ ಫೀಟ್‌ನಲ್ಲಿ ಸಂಗ್ರಹವಾದ ಕಸವನ್ನು ಲಿಫ್ಟ್‌ ಮೂಲಕ ವಾಹನದೋಳಗೆ ಶೇಖರಿಸಲಾಗುತ್ತದೆ.

ಕಸವನ್ನು ಸ್ಮಾರ್ಟ್ ಆಗಿ ವಿಲೇವಾರಿ ಮಾಡುವ ವಾಹನದ ಒಳಗಿನ ದೃಶ್ಯ

ನಗರದ ಕೆಲವೆಡೆ ಸ್ವಚ್ಛ-ಸ್ವಸ್ಥ ಟ್ರಸ್ಟ್‌ನವರು ಅಂಡರ್‌ ಗ್ರೌಂಡ್‌ ಡಸ್ಟ್‌ ಬಿನ್‌ಗಳನ್ನು ಅಳವಡಿಸಿದ್ದು,ಪ್ರತಿ ಬಿನ್‌ಗೆ 32 ಸಾವಿರ ರೂಪಾಯಿ ವೆಚ್ಚದಲ್ಲಿ ನೆಲದ ಒಳಗಡೆ ಇದನ್ನು ಅಳವಡಿಸಲಾಗುತ್ತದೆ. ಮೇಲೆ ಡಸ್ಟ್‌ಬಿನ್‌ಗಳನ್ನು ಕಸಹಾಕಲು ಅನುಕುಲವಾಗುವಂತೆ ಇರಿಸಲಾಗಿದ್ದು, ಈ ಬೊಲೆರೊದಲ್ಲಿ ಕಸ ಎತ್ತುವುದು ಸಂಪೂರ್ಣ ರಿಮೋಟ್ ಕಂಟ್ರೋಲ್‌ ಆಧಾರಿತವಾಗಿ ನಡೆಯುತ್ತದೆ.

ಅಂಡರ್‌ ಗ್ರೌಂಡ್‌ ಡಸ್ಟ್‌ ಬಿನ್‌

ಡಸ್ಟ್‌ಬಿನ್‌ನಿಂದ ಬೊಲೆರೊ ವಾಹನದೋಳಗೆ ಲಿಫ್ಟ್‌ ಮೂಲಕ ಕಸವನ್ನ ಮಾನವ ಶ್ರಮ ಇಲ್ಲದೆಯೇ  ಶೇಖರಣೆ ಮಾಡಲಾಗುತ್ತದೆ. ಹೀಗೆ ಸ್ವಸ್ಥ-ಸ್ವಚ್ಛ ಟ್ರಸ್ಟ್‌ನ ಸ್ವಯಂ ಸೇವಕರು ಪ್ರತಿ 10 ಮನೆಗಳಿಗೆ ಒಂದೊಂದು ವೇಸ್ಟ್‌ ಬಿನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ್ದಾರೆ.

ಮಿನಿ ವಾಹನದ ಚಿತ್ರಣ

ಈ ಬೊಲೆರೊ ವಾಹನದ ವಿನ್ಯಾಸವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲಾಗಿದೆ. ವಾಹನದ ಡಿಕ್ಕಿಯಲ್ಲಿ ಸ್ಟೀಲ್‌ ತಗಡು ಜೋಡಿಸಿ ಕಸದ ಹೊಲಸು ನೀರು ಸೋರಿಕೆಯಾಗದೇ ವಾಹನದಲ್ಲೇ ಶೇಕರಣೆಯಾಗುವಂತೆ ಮಾಡಲಾಗಿದೆ. ಈ ಮೂಲಕ ರಸ್ತೆಯುದ್ದಕ್ಕೂ ಕಸದ ಕೆಸರು ಬಸಿಯದಂತೆ ಜಾಗ್ರತೆ ವಹಿಸಲಾಗಿದೆ. ಈ ವಾಹನ ಅಭಿವೃದ್ಧಿಪಡಿಸಲು ಸುಮಾರು ₹ 12 ಲಕ್ಷ ಖರ್ಚಾಗಿದೆ. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ಸ್ವಚ್ಛ-ಸ್ವಸ್ಥ ಟ್ರಸ್ಟ್‌ ನಾಗರಿಕರಿಗೆ ಉಚಿತ ಸೇವೆ ಒದಗಿಸುತ್ತಿದ್ದು, ಸತತ 4 ವರ್ಷಗಳ ಕಸರತ್ತು ನಡೆಸಿರುವ ಟ್ರಸ್ಟ್‌ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

Published On - 7:55 pm, Fri, 5 February 21