ಬೆಂಗಳೂರು, (ಜುಲೈ 15): ವಿಧಾನ ಮಂಡಲ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಶುರುವಾಗಿದೆ. ನಿರೀಕ್ಷೆಯಂತೆ ವಾಲ್ಮೀಕಿ ನಿಗಮದ ಹಗರಣ (Valmiki Scam) ಪ್ರತಿಧ್ವನಿಸಿದೆ. ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಬಳಿಕ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಸರ್ಕಾರದ ವಿರುದ್ಧ ಹಗರಣ ಬಗ್ಗೆ ಧ್ವನಿ ಎತ್ತಿದರೆ, ಇತ್ತ ವಿಧಾನಪರಿಷತ್ ಕಲಾಪದಲ್ಲಿ ಸಿಟಿ ರವಿ, ಹಗರಣ ಬಗ್ಗೆ ಅಬ್ಬರಿಸಿದರು. ಸರ್ಕಾರದ ವಿರುದ್ಧ ಅಬ್ಬರಿಸುವ ಮಧ್ಯ ಸಿಟಿ ರವಿ ಅವರು ನಿತ್ಯ ಸುಮಂಗಲಿ ಪದ ಬಳಕೆ ಮಾಡಿದರು. ಈ ಬಗ್ಗೆ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಶುರುವಾಗುತ್ತಿದ್ದಂತೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಮಧ್ಯ ಪ್ರವೇಶಿಸಿ, ಸುಮಂಗಲಿ ಪದ ಬಳಕೆ ಮಾಡಿದ ಸಿಟಿ ರವಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಿನ್ನೆ(ಜುಲೈ 14) ವಕ್ಫ್ ಬೋರ್ಡ್ ನಲ್ಲಿ ಅಕ್ರಮದ ಆರೋಪ ಬಂದಿದೆ. ದಲಿತರ ಹಣ ಅಕ್ರಮವಾಗಿದೆ. ಹಿಂದುಳಿದ ವರ್ಗದ ಹಣಕೂಡಾ ಲೂಟಿ ಆಗಿದೆ. ಆಡು ಮುಟ್ಟದ ಸೊಪ್ಪಿಲ್ಲ ರೂಪದಲ್ಲಿ ಎಲ್ಲದ್ರಲ್ಲೂ ಲೂಟಿ ಹೊಡೆದಿದ್ದಾರೆ. ಸತ್ಯ ಮರೆಮಾಚಲು ಕಾಂಗ್ರೆಸ್ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಸಿಟಿ ರವಿ ಗುಡುಗಿದರು. ಸಿಟಿ ರವಿ ಮಾತಿಗೆ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅಡ್ಡಿಪಡಿಸಿ, ಬಿಜೆಪಿ ಸರ್ಕಾರ ಹೇಗೆ ಬಂತು ಹೇಳಿ ನೋಡೋಣ ಎಂದು ವಿಶ್ವನಾಥ್ ಕಾಲೆಳೆದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಿಟಿ ರವಿ, ಕೆಲವರು ನಿತ್ಯ ಸುಮಂಗಲಿಯರು ಇರುತ್ತಾರೆ. ದೀರ್ಘ ಸುಮಂಗಲಿಯರು ಇರುತ್ತಾರೆ. ಅವರು ಅಧಿಕಾರ ಇರೋ ಕಡೆ ನಿತ್ಯ ಸುಮಂಗಲಿಯರು ಹೋಗುತ್ತಾರೆ ಎಂದು ಪುಟ್ಟಣ್ಣಗೆ ಟಾಂಗ್ ಕೊಟ್ಟರು. ಪುಟ್ಟಣ ಅವರು ಮೊದಲು ಜೆಡಿಎಸ್ನಲ್ಲಿದ್ದರು. ಬಳಿಕ ಅವರು ಬಿಜೆಪಿ ಸೇರಿದ್ದು, ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷಾಂತರ ಮಾಡಿದ್ದರಿಂದ ಅಧಿಕಾರ ಇರೋ ಕಡೆ ನಿತ್ಯ ಸುಮಂಗಲಿಯರು ಹೋಗುತ್ತಾರೆ ಎಂದು ಸಿಟಿ ರವಿ ಕಾಲೆಳೆದರು.
ಹೀಗೆ ನಿತ್ಯ ಸುಮಂಗಲಿಯರು, ದೀರ್ಘ ಸುಮಂಗಲಿಯರು ಎನ್ನುವ ಪದ ಬಗ್ಗೆ ಮಾತಿನ ಚರ್ಚೆ ತಾರಕಕ್ಕೇರಿದ್ದೆ ತಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಮಧ್ಯ ಪ್ರವೇಶಿಸಿದ್ದು, ಮೊದಲು ನಿತ್ಯ ಸುಮಂಗಲಿ ಪದ ಬಳಕೆ ಮಾಡಿದ್ದ ಸಿಟಿ ರವಿ ವಿರುದ್ಧ ಕಿಡಿಕಾರಿದರು. ನಿತ್ಯ ಸುಮಂಗಲಿ ಎನ್ನುವುದು ಸರಿಯಲ್ಲ. ಇದು ಸಿಟಿ ರವಿ ಅವರ ಮನಸ್ಥಿತಿ ಎಂದು ಮಾತಿನಲ್ಲೇ ತಿವಿದರು.
ಇನ್ನು ಸಿಟಿ ರವಿ ಅವರ ನಿತ್ಯ ಸುಮಂಗಲಿ ಪದ ಬಳಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಕೆಲ ಕಾಲ ವಾದ-ಪ್ರತಿವಾದದ ಗಲಾಟೆ ಆಯ್ತು. ಬಳಿಕ ಮಧ್ಯ ಪ್ರವೇಶಿಸಿದ ಉಪ ಸಭಾಪತಿ, ನಿತ್ಯ ಸುಮಂಗಲಿ ಪದ ಬಳಕೆಯನ್ನು ಕಡತದಿಂದ ತೆಗೆದು ಹಾಕಿದರು.