ಸುಧಾಕರ್ ಆರೋಗ್ಯ ಸಚಿವರಲ್ಲ- ಅನಾರೋಗ್ಯ ಸಚಿವ, ತಾಂತ್ರಿಕ ಸಲಹಾ ಸಮಿತಿಯಲ್ಲಿರುವವರು ಅಜ್ಞಾನಿಗಳು: ತನ್ವೀರ್ ಪಾಷಾ

| Updated By: guruganesh bhat

Updated on: Apr 11, 2021 | 5:08 PM

ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಮಾಡುವುದು ಅವೈಜ್ಞಾನಿಕ ತೀರ್ಮಾನವಾಗುತ್ತದೆ. ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ ಎಂದು ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹರಿಹಾಯ್ದರು.

ಸುಧಾಕರ್ ಆರೋಗ್ಯ ಸಚಿವರಲ್ಲ- ಅನಾರೋಗ್ಯ ಸಚಿವ, ತಾಂತ್ರಿಕ ಸಲಹಾ ಸಮಿತಿಯಲ್ಲಿರುವವರು ಅಜ್ಞಾನಿಗಳು: ತನ್ವೀರ್ ಪಾಷಾ
ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ
Follow us on

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಮಾಡುವುದು ಅವೈಜ್ಞಾನಿಕ ತೀರ್ಮಾನವಾಗುತ್ತದೆ. ತಾಂತ್ರಿಕ ಸಲಹಾ ಸಮಿತಿಯಲ್ಲಿರುವವರು ಅಜ್ಞಾನಿಗಳು. ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ ಎಂದು ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹರಿಹಾಯ್ದರು. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಲಾಕ್‌ಡೌನ್ ಮಾಡಿದರೆ ಆಟೋ, ಓಲಾ, ಉಬರ್ ಚಾಲಕರಿಗೆ ವ್ಯಾಪಕ ನಷ್ಟವಾಗುತ್ತದೆ. ಈ ನಷ್ಟವನ್ನು ಸರ್ಕಾರವೇ ಭರಿಸಲಿ ಎಂದು ಒತ್ತಾಯಿಸಿದರು.

ನೈಟ್ ಕರ್ಫ್ಯೂ ಹಾಗೂ ರಾತ್ರಿಯ ಹೊತ್ತಿನ ಲಾಕ್‌ಡೌನ್ ಕೂಡ ಅವೈಜ್ಞಾನಿಕ ಕ್ರಮ ಎಂದು ಹೇಳಿದ ಅವರು, ಸರ್ಕಾರದ ನಿರ್ಧಾರಗಳಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಮೊದಲ ಅಲೆಯ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟವಾಗಿದೆ. ಆ ನಷ್ಟದಿಂದ ಸುಧಾರಿಸಿಕೊಳ್ಳಲು ಈವರೆಗೆ ನಮ್ಮಿಂದ ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಲಾಕ್​ಡೌನ್ ಎಂದರೆ ಹೇಗೆ? ಆಟೋ, ಟ್ಯಾಕ್ಸಿ ಚಾಲಕರು ಜೀವನ ಮಾಡೋದು ಹೇಗೆ ಎಂದು ಪ್ರಶ್ನಿಸಿದರು.

ಸಾಮಾನ್ಯವಾಗಿ ರಾತ್ರಿ 10ರಿಂದ 12 ಗಂಟೆ ವೇಳೆಯಲ್ಲಿ ಹೆಚ್ಚು ಬಾಡಿಗೆ ಸಿಗುತ್ತಿತ್ತು. ನೈಟ್ ಕರ್ಫ್ಯೂನಿಂದ ಆಟೋ, ಟ್ಯಾಕ್ಸಿ ಚಾಲಕರಿಗೆ ಕಷ್ಟವಾಗುತ್ತಿದೆ. ರಾತ್ರಿ 10 ಗಂಟೆಯ ನಂತರ ಮಾತ್ರ ಕೊರೊನಾ ಬರುತ್ತಾ? ಬೆಳಗ್ಗೆ ಹೊತ್ತು ಕೊರೊನಾ ಹರಡೋದಿಲ್ವಾ? ಯಾವುದೇ ಕಾರಣಕ್ಕೂ ಮತ್ತೊಮ್ಮ ಲಾಕ್​ಡೌನ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಷ್ಟಕ್ಕೆ ಬಂತು ಚಾಲಕರ ಬದುಕು
ಕೊರೊನಾ ತಡೆಗೆಂದು ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಮತ್ತು ಕೆಎಸ್​ಆರ್​ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ಆಟೊ, ಓಲಾ, ಉಬರ್ ಚಾಲಕರ ನಿತ್ಯ ಬದುಕಿನ ನಿರ್ವಹಣೆಯೇ ಕಷ್ಟವಾಗಿದೆ. ಬಸ್ ಸಂಚಾರ ಕಡಿಮೆಯಾಗಿರುವುದರಿಂದ ಮೊದಲಿನಂತೆ ಇತರ ಊರುಗಳಿಂದ ನಗರಕ್ಕೆ ಹೆಚ್ಚು ಜನರು ಬರುತ್ತಿಲ್ಲ. ಇದು ನಿತ್ಯದ ಬಾಡಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗಂತೂ ಬಹುತೇಕರ ಮನೆಗಳಲ್ಲಿ ದ್ವಿಚಕ್ರ ವಾಹನಗಳು ಇರುವುದರಿಂದ ಆಟೊಗಳಿಗೆ ಮೊದಲಿನಷ್ಟು ಬಾಡಿಗೆ ಸಿಗುತ್ತಿಲ್ಲ ಎಂದು ಆಟೊ ಚಾಲಕರೊಬ್ಬರು ತಿಳಿಸಿದರು.

ಬಿಎಂಟಿಸಿ ಮುಷ್ಕರದಿಂದ ಬೆಂಗಳೂರು ಆಟೊಗಳಿಗೆ ಲಾಭವಾಗಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ಮೆಟ್ರೊ ಸಂಚಾರ ವ್ಯವಸ್ಥೆ ಸುಧಾರಿಸಿರುವುದರಿಂದ ಆಟೊಗಳ ಮೇಲಿನ ಅವಲಂಬನೆ ಈಗ ಮೊದಲಿನಷ್ಟು ಇಲ್ಲ. ದ್ವಿಚಕ್ರ ವಾಹನಗಳಲ್ಲಿ ನಗರದೊಳಗೆ ಕರೆದೊಯ್ಯುವ ಆ್ಯಪ್ ಆಧರಿತ ಸೇವೆಗಳು ಬಂದ ನಂತರ ನಮ್ಮ ಕಲೆಕ್ಷನ್​ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್​ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್

ಇದನ್ನೂ ಓದಿ: ಮೇ 2ನೇ ವಾರದ ವೇಳೆಗೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ: ಆರೋಗ್ಯ ಸಚಿವ ಡಾ.ಕೆ ಸುಧಾಕರ್

(Tanveer Pasha of ola uber association demands compensation of karnataka government announces lockdown)

Published On - 5:05 pm, Sun, 11 April 21