ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್
Arvind Kejriwal: ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ , ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಕೊವಿಡ್-19 ರೋಗವನ್ನು ನಿಯಂತ್ರಿಸಲು ಲಾಕ್ಡೌನ್ ಪರಿಹಾರವಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕಳೆದ 24ಗಂಟೆಗಳಲ್ಲಿ 10,732 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ , ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಕೊವಿಡ್-19 ರೋಗವನ್ನು ನಿಯಂತ್ರಿಸಲು ಲಾಕ್ಡೌನ್ ಪರಿಹಾರವಲ್ಲ. ಆಸ್ಪತ್ರೆಯ ಕೊರತೆ ಕಂಡು ಬಂದರೆ ಮಾತ್ರ ಲಾಕ್ಡೌನ್ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದ್ದಾರೆ.
24 ಗಂಟೆಗಳಲ್ಲಿ ದೆಹಲಿಯಲ್ಲಿ 10,732 ಪ್ರಕರಣಗಳು ವರದಿಯಾಗಿವೆ . ನಿನ್ನೆ ಸಂಜೆ ಈ ಮಾಹಿತಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿತ್ತು. ದೇಶದ ರಾಜಧಾನಿಯಲ್ಲಿ ಕೊವಿಡ್ ವ್ಯಾಪಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದಿದ್ದಾರೆ ಕೇಜ್ರಿವಾಲ್. ಮಾರ್ಚ್ ತಿಂಗಳ ಮಧ್ಯ ಅವಧಿವರೆಗೆ ದೆಹಲಿಯಲ್ಲಿ 200 ಹೊಸ ಪ್ರಕರಣಗಳಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದವು. ನಿನ್ನೆ 7,897 ಹೊಸ ಪ್ರಕರಣಗಳು ವರದಿಯಾಗಿವೆ. ಇದಕ್ಕಿಂತ ಮೊದಲ ದಿನ 8,500 ಪ್ರಕರಣಗಳು ವರದಿ ಆಗಿತ್ತು.
कोरोना संक्रमण की वर्तमान स्थिति पर एक महत्वपूर्ण प्रेस कॉंफ्रेंस | LIVE https://t.co/Yxau3n2XPk
— Arvind Kejriwal (@ArvindKejriwal) April 11, 2021
ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ ಸರ್ಕಾರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿದೆ ಎಂದಿದ್ದಾರೆ. ನವೆಂಬರ್ 11ರಂದು ದೆಹಲಿಯಲ್ಲಿ 8,593 ಕೊರೊನಾವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು ಇಲ್ಲಿಯವರೆಗೆ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದಾಗಿದೆ.
Lockdown not a solution to fight coronavirus, it should only be imposed if hospital system collapses: Delhi CM Arvind Kejriwal
— Press Trust of India (@PTI_News) April 11, 2021
ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲಿರಿಸಬೇಕು. ರೋಗಿಗಳು ಆಸ್ಪತ್ರೆಗೆ ಬಂದಾಗ, ಎಲ್ಲ ಹಾಸಿಗೆ ಭರ್ತಿಯಾಗಿರುವ ಹೊತ್ತಲ್ಲಿ ಲಾಕ್ಡೌನ್ ನಿರ್ಬಂಧ ಹೇರುವ ನಿರ್ಧಾರ ಕೈಗೊಳ್ಳಬಾರದು. ಕೊರೊನಾವೈರಸ್ ಹರಡುವುದನ್ನು ತಡೆಯಲು ಎಲ್ಲ ಪಕ್ಷಗಳು ಜತೆಯಾಗಿ ಕೆಲಸ ಮಾಡಬೇಕು. ಈ ಹೊತ್ತಿನಲ್ಲಿ ಮತ್ತೊಬ್ಬರತ್ತ ಬೆರಳು ತೋರಿಸುವುದು ಅಥವಾ ರಾಜಕೀಯ ಆಟ ಆಡುವುದಾಗಲೀ ಮಾಡಬಾರದು ಎಂದಿದ್ದಾರೆ.
ಭಾರತದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1.52ಲಕ್ಷ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್ನಿಂದಾಗಿ 839 ಮಂದಿ ಸಾವಿಗೀಡಾಗಿದ್ದು ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1,52,879ಕ್ಕೇರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,33,58,805ಆಗಿದ್ದು ಸಾವಿನ ಸಂಖ್ಯೆ 1,69,275ಕ್ಕೆ ತಲುಪಿದೆ. 11,08,087 ಸಕ್ರಿಯ ಪ್ರಕರಣಗಳಿದ್ದು 1,20,81,443 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಕೊವಿಡ್ ಲಸಿಕೆ ಪಡೆದುಕೊಂಡವರ ಸಂಖ್ಯೆ 10,15,95,147ಆಗಿದೆ. ಕಳೆದ 5 ದಿನಗಳಿಂದ ಸತತವಾಗಿ 1 ಲಕ್ಷಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 33,43,951 ಆಗಿದ್ದು 4,160 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ 1,14, 423 ಆಗಿದ್ದು ಇಲ್ಲಿವರೆಗೆ 11, 235 ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ ಛತ್ತೀಸಗಡದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 4,32,776 ಅಗಿದ್ದು ಮೃತರ ಸಂಖ್ಯೆ 4,777 ಆಗಿದೆ. ದಕ್ಷಿಣ ಭಾರತದ ರಾಜ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 10,55,040 ಆಗಿದ್ದು, 12,849 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11, 60, 204 ಆಗಿದ್ದು ಸಾವಿನ ಸಂಖ್ಯೆ 4,767 ಆಗಿದೆ. ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ 9,26, 816 ಆಗಿದ್ದು, ಸಾವಿನ ಸಂಖ್ಯೆ 12,886ಆಗಿದೆ. ಆಂಧ್ರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 9,21,906 ಸಾವಿನ ಸಂಖ್ಯೆ 7,291ಕ್ಕೇರಿದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1.52ಲಕ್ಷ, ಇಂದಿನಿಂದ ಲಸಿಕೆ ಉತ್ಸವ