ಪರೀಕ್ಷೆ ಬರೀರಿ, ಕೆಲಸ ಸಿಗದಿದ್ರೆ ಯಾರೂ ಸಹಾಯಕ್ಕೆ ಬರಲ್ಲ: ವಿದ್ಯಾರ್ಥಿನಿಯರಿಗೆ ತೇಜಸ್ವಿ ಸೂರ್ಯ ಕಿವಿಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 3:22 PM

ರಾಜಕೀಯ ಲಾಭಕ್ಕೆ ಹಿಜಾಬ್ ವಿವಾದ ಬಳಕೆ ಮಾಡಿಕೊಳ್ಳುವವರ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಪರೀಕ್ಷೆ ಬರೀರಿ, ಕೆಲಸ ಸಿಗದಿದ್ರೆ ಯಾರೂ ಸಹಾಯಕ್ಕೆ ಬರಲ್ಲ: ವಿದ್ಯಾರ್ಥಿನಿಯರಿಗೆ ತೇಜಸ್ವಿ ಸೂರ್ಯ ಕಿವಿಮಾತು
ಸಂಸದರಾದ ತೇಜಸ್ವಿ ಸೂರ್ಯ ಮತ್ತು ಮುನಿಸ್ವಾಮಿ
Follow us on

ಕೋಲಾರ: ಇನ್ನೇನು ಪರೀಕ್ಷೆ ಬರೆಯಬೇಕು ಎನ್ನುವಾಗ ಹಿಜಾಬ್ ವಿವಾದ ಬೃಹದಾಕಾರದಲ್ಲಿ ಬೆಳೆದಿದೆ. ಪರೀಕ್ಷೆ ಬರೆಯಬೇಡಿ ಎಂದು ಕುಮ್ಮಕ್ಕು ಕೊಡುವವರನ್ನು ನಂಬಬೇಡಿ. ಉದ್ಯೋಗ ಸಿಗದಿದ್ದರೆ ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ. ರಾಜಕೀಯ ಲಾಭಕ್ಕೆ ಹಿಜಾಬ್ ವಿವಾದ ಬಳಕೆ ಮಾಡಿಕೊಳ್ಳುವವರ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಕೋಲಾರದಲ್ಲಿ ಮಾತನಾಡಿದ ಅವರು, ಕಣ್ಣಿಗೆ ಕಾಣದ, ಹಿತ ಬಯಸದ, ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮುಸ್ಲಿಂ ಯುವತಿಯರು ಇವರ ಮಾತಿಗೆ ಕಿವಿಗೊಡಬಾರದು. ಸೈಕಲ್ ಜಾಥಾ ನೆಪದಲ್ಲಿ ಕೋಲಾರದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದ ಬಳಿಕ ಕ್ಲಾಕ್ ಟವರ್​ನಲ್ಲಿ ಭಾರತದ ಧ್ವಜ ಹಾರಿಸಿದ್ದೇವೆ. ಸೈಕಲ್ ಜಾಥಾದಿಂದ ಆರೋಗ್ಯ ಸುಧಾರಿಸುತ್ತೆ. ಜೆಡಿಎಸ್ ಪಕ್ಷ ಕರ್ನಾಟದಲ್ಲಿ ಕಡೆಯ ಹಂತ ತಲುಪಿದೆ. ಸೈಕಲ್ ಜಾಥಾ ಮಾಡಿರುವ ಉದ್ದೇಶ, ಅವರ ಪಕ್ಷದ ಸಿದ್ಧಾಂತ ಏನು ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಭಾರತದ ಬಾವುಟ ಹಾರಿಸಿರುವ ಬಗ್ಗೆ ಜೆಡಿಎಸ್ ಪಕ್ಷದವರ ನಿಲುವು ಏನು ಎನ್ನುವುದನ್ನು ತಿಳಿಸಲಿ. ಒಬ್ಬ ಪ್ರಬುದ್ಧ ನಾಯಕ ಈ ರೀತಿ ಹೇಳಿಕೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸಂಸದ ಮುನಿಸ್ವಾಮಿ ಒಬ್ಬ ಸಾಂದರ್ಭಿಕ ಶಿಶು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುನಿಸ್ವಾಮಿ, ಯಾರು ಸಾಂದರ್ಭಿಕ ಶಿಶು ಎಂದು ನನಗೂ ತಿಳಿದಿದೆ ಎಂದರು. ಅವರಷ್ಟು ದೊಡ್ಡವನು ನಾನಲ್ಲ. ಅವರು ಸಂವಿಧಾನದ ಪ್ರತಿ ಪೇಜ್ ಓದಿರುವವರು. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದರು.

ನಾನು ಕ್ಲಾಕ್ ಟವರ್​ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ. ಅದು ದೇಶದ್ರೋಹ ಅಂತ ಅವರು ತಿಳಿದುಕೊಂಡ್ರೆ ನಾನು ದಿನಾ ದೇಶದ್ರೋಹ ಕೆಲಸ ಮಾಡ್ತೇನೆ. ಅತ್ಯಾಚಾರ ಅನುಭವಿಸಬೇಕು ಎಂದು ಅವರು ಸೆಷನ್​ನಲ್ಲಿ ಹೇಳಿದರು. ಆಗಲೇ ಅವರ ಮನಸ್ಥಿತಿ ಏನೆಂಬುದು ನನಗೂ ಅರ್ಥವಾಯಿತು. ಯಾರು ಸಾಂದರ್ಭಿಕ ಶಿಶು ಎಂದು ನನಗೂ ತಿಳಿದಿದೆ. ಕ್ಲಾಕ್ ಟವರ್ ನಲ್ಲಿ ಶಾಂತಿ ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ಸದನದಲ್ಲಿ ರಮೇಶ್ ಕುಮಾರ್ ಹೇಳಿಕೆ ನೀಡಿದ್ದನ್ನು ಅವರು ನೆನಪಿಸಿಕೊಂಡರು.

ಇದನ್ನೂ ಓದಿ: ಎಸ್ಎಸ್ಎಲ್​ಸಿ ಪರೀಕ್ಷೆ; ಹಿಜಾಬ್ ಧರಿಸಿಕೊಂಡು ಬಂದರೆ ಎಕ್ಸಾಂಗೆ ಅವಕಾಶ ಇಲ್ಲ

ಇದನ್ನೂ ಓದಿ: ಶಿಕ್ಷಣ ಸಚಿವರ ಹೇಳಿಕೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಗರಂ; ಕೋರ್ಟ್ ನಿಯಮದನ್ವಯ ನಾವು ಶುಲ್ಕದ ಆದೇಶ ಸ್ವಾಗತಿಸಿದ್ದೇವೆ ಎಂದ ರುಪ್ಸಾ