ಧಾರವಾಡ: ಕೊರೊನಾ ಮೊದಲನೇ ಅಲೆಗಿಂತ ಎರಡನೇ ಅಲೆ ಸಾಕಷ್ಟು ಹಾನಿ ಮಾಡಿದೆ. ಕೊರೊನಾ ಎರಡನೇ ಅಲೆಯಿಂದ ಜನರು ಭಯದಲ್ಲೇ ಕಾಲ ಕಳೆಯುಂವತಾಗಿದೆ. ಇನ್ನು ಸೋಂಕಿತರು ಮಾತ್ರವಲ್ಲದೆ ಸಂಬಂಧಿಕರೂ ಕೂಡ ಮಾನಸಿಕ ಖಿನ್ನತೆಗೆ ಒಳಗಾಗುವಂತಾಗಿದೆ. ಇಂಥವರಿಗೆ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಆರಾಮದಾಯಕ ಜೀವನ ಸಾಗಿಸುವಂತೆ ಮಾಡುವಲ್ಲಿ ಸದ್ಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಮುಂದೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮಾನಸಿಕ ತಜ್ಞರಿಂದ ಟೆಲಿ ಕೌನ್ಸೆಲಿಂಗ್
ರೋಗ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದ ತಕ್ಷಣವೇ ಬಹುತೇಕ ಸೋಂಕಿತರು ಹೆದರಿ ಮುಂದೇನು? ಎಂಬ ಚಿಂತೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂಥ ಜನರಿಗೆ ಡಿಮ್ಹಾನ್ಸ್‌ನ ಮಾನಸಿಕ ತಜ್ಞರು ಟೆಲಿ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. ಸೋಂಕಿತರು ಹಾಗೂ ಸಂಬಂಧಿಕರ ಜತೆಗೆ ಮಾತನಾಡಿ, ಮೊದಲು ಅವರ ಸ್ಥಿತಿ ಅರಿತುಕೊಳ್ಳುತ್ತಾರೆ. ಬಳಿಕ ಧೈರ್ಯ ತುಂಬಿ, ಮಾನಸಿಕ ಖಿನ್ನತೆಗೆ ಒಳಗಾಗದಿರಲು ಏನು ಮಾಡಬೇಕು ಎಂಬ ಮಾಹಿತಿ ನೀಡುತ್ತಾರೆ.
3000 ಜನರೊಂದಿಗೆ ಆಪ್ತ ಸಮಾಲೋಚನೆ
ಒಂದು ತಿಂಗಳಿನಿಂದ ಆರಂಭವಾಗಿರುವ ಈ ಟೆಲಿ ಕೌನ್ಸೆಲಿಂಗ್‌ನಲ್ಲಿ 14 ಸಿಬ್ಬಂದಿ ನಿತ್ಯ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರೆಗೆ ಸುಮಾರು 3000 ಜನರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಜಟಿಲ ಸಮಸ್ಯೆಗಳಿದ್ದಲ್ಲಿ ಅದರಿಂದ ಹೊರಬರಲು ಮಾಡಬೇಕಾದ ಯೋಗ, ವ್ಯಾಯಾಮಗಳ ಸಲಹೆ ಜತೆಗೆ ಒಂದಿಷ್ಟು ಔಷಧಿಗಳ ಮಾಹಿತಿ ಸಹ ನೀಡುತ್ತಿದ್ದಾರೆ.
ಕಿಮ್ಸ್, ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಸಂಪರ್ಕ ಸಂಖ್ಯೆ ಪಡೆದು ಡಿಮ್ಹಾನ್ಸ್‌ನ ಮಾನಸಿಕ ತಜ್ಞರು ಸಮಾಲೋಚನೆ ನಡೆಸುತ್ತಾರೆ. ಇನ್ನು ಸೋಂಕಿನ ಬಗ್ಗೆ ಭಯ, ಆತಂಕ ಇದ್ದವರು ಆಸ್ಪತ್ರೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದಲ್ಲದೆ ಕಪ್ಪು ಶಿಲೀಂಧ್ರ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡುವುದು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ.
ಯಾರಾದರೂ ಕರೆ ಮಾಡಿ, ಮಾರ್ಗದರ್ಶನ ಪಡೆಯಬಹುದು
ಒತ್ತಡ, ಆತಂಕ, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುವ, ಯಾವುದೇ ಮಾನಸಿಕ ಅನಾರೋಗ್ಯ ಅನುಭವಿಸುತ್ತಿರುವವರು ಸಹಾಯವಾಣಿ ಸಂಖ್ಯೆ(0091), ದೂರವಾಣಿ: 0836-2748401/ 402/403 ಸಂಪರ್ಕಿಸಬಹುದು.
ಜನರಿಗೆ ಧೈರ್ಯ ತುಂಬುವುದೇ ನಮ್ಮ ಕರ್ತವ್ಯ – ಡಾ. ಮಹೇಶ ದೇಸಾಯಿ, ಡಿಮ್ಹಾನ್ಸ್ ನಿರ್ದೇಶಕ
ಹೆಚ್ಚಿನ ಸೋಂಕಿತರು ಭಯಗೊಂಡು ಖಿನ್ನತೆಗೆ ಒಳಗಾಗುತ್ತಾರೆ. ಇಂಥವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಈ ಕಾರ್ಯ ಆರಂಭಿಸಲಾಗಿದೆ. ಯಾವ ಭಯ ಇಲ್ಲದೆ ಗುಣವಾಗಬಹುದು ಎಂದು ಹೇಳಿ ಅವರಲ್ಲಿ ಧೈರ್ಯ ತುಂಬುವ ಕೆಲಸ ನಡೆದಿದೆ. ಇದಕ್ಕೆ 14 ಸಿಬ್ಬಂದಿ 2 ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಟಿವಿ9 ಡಿಜಿಟಲ್‌ಗೆ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ತಿಳಿಸಿದ್ದಾರೆ.
ಒಂದೆಡೆ ಕೊರೊನಾ ತಡೆಗೆ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಅದರಿಂದಾಗುವ ಅಡ್ಡ ಪರಿಣಾಮ ತಡೆಯುವ ಕೆಲಸವೂ ಡಿಮ್ಹಾನ್ಸ್‌ನ ಮಾನಸಿಕ ತಜ್ಞರಿಂದ ಆಗುತ್ತಿದೆ. ಹೀಗಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ:
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಟೆಲಿ ಮೆಡಿಸಿನ್ ಸೇವೆ; ಮೈಸೂರು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ
ಕೊರೊನಾ ಸೋಂಕು ಇರುವಾಗ ಬೇರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದೆ? ಸೋಂಕು ತಜ್ಞರು ಹೇಳೋದೇನು?