ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಈಗ ಕೊಂಚ ತಿಳಿಯಾಗಿದೆ. ಕೊರೊನಾ ಎರಡನೆಯ ಅಲೆ ಭಯಾನಕವಾಗಿ ಎದುರಾದಾಗ ರಾಜ್ಯ ಸರ್ಕಾರ ತರಾತುರಿಯಲ್ಲಿ ಲಾಕ್ಡೌನ್ ಜಾರಿಗೊಳಿಸಿತ್ತು. ದಿಢೀರನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳು ಲಭ್ಯವಾಗದೆ ಆತಂಕದ ಗೂಡಾಗಿತ್ತು ರಾಜಧಾನಿ ಬೆಂಗಳೂರು. ಆಕ್ಸಿಜನ್, ಐಸಿಯು, ವೆಂಟಿಲೇಟರ್ಗಳು, ಔಷಧಗಳು ಲಭ್ಯವಾಗದೆ ಸೋಂಕಿತರು ರಸ್ತೆರಸ್ತೆಗಳಲ್ಲಿ, ಆಸ್ಪತ್ರೆಗಳ ಬಾಗಿಲ ಬಳಿಯೇ ಪ್ರಾಣ ಬಿಡುವಂತಹ ಪ್ರಕರಣಗಳು ಹೆಚ್ಚಾಗತೊಡಗಿದವು. ಕೊನೆಗೆ ಮೃತ ಸೋಂಕಿತರ ಅಂತ್ಯಸಂಸ್ಕಾರವೂ ಕಗ್ಗಂಟಾಗಿತ್ತು. ಇದಕ್ಕೆಲ್ಲ ಪರಿಹಾರೋಪಾಯ ಎಂಬಂತೆ ನಿಯಂತ್ರಣ ಕ್ರಮವಾಗಿ ಲಾಕ್ಡೌನ್ ಅನ್ನು ಜಾರಿಗೊಳಿಸಿತು. ದೇಶದ ಬಹುತೇಕ ರಾಜ್ಯಗಳ ಪರಿಸ್ಥಿತಿಯೂ ಹೀಗೇ ಆಗಿತ್ತು. ಅದಾದ ಬಳಿಕ, ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ಕೊರೊನಾ ವೈರಸ್ ಚೈನ್ ಕಟ್ ಆಗಿ ಸೋಂಕು ತಹಬಂದಿಗೆ ಬಂದಿದೆ ಅನ್ನಬಹುದು. ಆದರೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಹಿಡಿತಕ್ಕೆ ಸಿಕ್ಕಿದೆ ಅನ್ನುವ ಹಾಗಿಲ್ಲ. ಏಕೆಂದ್ರೆ ಬರೀ ಕೊರೊನಾ ಮಾರಿಯೊಂದೇ ಅಲ್ಲ ಅದರ ಜೊತೆಜೊತೆಗೆ ಫಂಗಸ್ಗಳೂ ಬಣ್ಣ ಬಣ್ಣಗಳಲ್ಲಿ ಬಂದಿದ್ದು ಮನುಷ್ಯ ಪೇಲವವಾಗತೊಡಗಿದ್ದಾನೆ. ಆದರೂ ಪರಿಸ್ಥಿತಿ ತಿಂಗಳ ಹಿಂದೆಯಿದ್ದಷ್ಟು ಭೀಕರವಾಗಿಲ್ಲ ಅನ್ನಬಹುದು. ಇದಕ್ಕೆ ಪೂರಕವಾಗಿ ಕೆಳಗಿನ ಅಂಶಗಳನ್ನು ನೋಡುವುದಾದರೆ..
ಹೌದು, ರಾಜ್ಯದ ಜನ ಸರ್ಕಾರದ ಆದೇಶದಂತೆ ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರ ಪರಿಣಾಮ ಐಸಿಯು, ಐಸಿಯು ವೆಂಟಿಲೇಟರ್ ಹಾಸಿಗೆಗಳ ಅಭಾವ ಕೊಂಚ ಇಳಿಕೆಯಾಗಿದೆ. ಆಕ್ಸಿಜನ್ ಸಕಾಲಕ್ಕೆ ಸಿಗುವಂತಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ. ಶೇ.10 ರಷ್ಟು ಐಸಿಯು ಬೆಡ್ ಗಳು ನಗರದಲ್ಲಿ ಲಭ್ಯವಾಗುತ್ತಿವೆ. ಸಧ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು ಹೆಚ್ಡಿಯು ಬೆಡ್ ಗಳು 1554 ಇದ್ದು ಬಹುತೇಕ ಖಾಲಿ ಇವೆ. ಇನ್ನು ಐಸಿಯು ಬೆಡ್ 291, ಐಸಿಯು ವಿತ್ ವೆಂಟಿಲೇಟರ್ ಬೆಡ್ 174 ಗಳು ಇವೆ.
ಹಾಗೆಯೇ, ಬೆಂಗಳೂರಿನ ಮೆಡಿಕಲ್ ಕಾಲೇಜ್ ಗಳಲ್ಲಿ ಹೆಚ್ಡಿಯು ಹಾಸಿಗೆಗಳು 1849 ಇವೆ, ಐಸಿಯು -146, ಐಸಿಯು ವಿತ್ ವೆಂಟಿಲೇಟರ್ -159 ಹಾಸಿಗೆಗಳು ಇವೆ. ಇನ್ನು ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜ್ ಗಳಲ್ಲಿ ಹೆಚ್ಡಿಯು -265 ಹಾಸಿಗೆಗಳು, ಐಸಿಯು -23 ಹಾಸಿಗೆಗಳು, ಐಸಿಯು ವಿತ್ ವೆಂಟಿಲೇಟರ್ -22 ಹಾಸಿಗೆಗಳು ಇವೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಡಿಯು -100 ಹಾಸಿಗೆಗಳು, ಐಸಿಯು -70 ಹಾಸಿಗೆಗಳು, ಐಸಿಯು ವಿತ್ ವೆಂಟಿಲೇಟರ್- 79 ಹಾಸಿಗೆಗಳಿದ್ದು ಈ ಪೈಕಿ ಬಹುತೇಕ ಬೆಡ್ ಗಳು ಫುಲ್ ಆಗಿದ್ದು, ಶೇ. 10 ರಷ್ಟು ಮಾತ್ರ ಐಸಿಯು ಬೆಡ್ ಗಳು ಖಾಲಿ ಇವೆ.
ಪರಿಸ್ಥಿತಿ ಹೀಗೆ ಕೊರೊನಾದಿಂದ ದೂರವಾಗಿ ಸದ್ಯ ತಿಳಿಯಾಗುತ್ತಿದೆ. ಆದರೆ ಕೊಂಚವೇ ಯಾಮಾರಿದರೂ ಕೊರೊನಾ ಮಹಾಮಾರಿ ಮತ್ತೆ ಧುತ್ತನೆ ಎದುರಾಗುವುದು ನಿಶ್ಚಿತ. ಏಕೆಂದರೆ ಕೊರೊನಾ ಸಂಪೂರ್ಣವಾಗಿ ಮಾಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಿಗೆ ಕೊರೊನಾ 3ನೆಯ ಅಲೆ ಎದುರಾಗುವ ಅಪಾಯ ಎದುರಿಗೇ ಇದೆ. ಹಾಗಾಗಿ, ಸ್ವಯಂ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ನಮಗೂ ಕ್ಷೇಮ ನಾಡಿಗೂ ಕ್ಷೇಮ, ಅಲ್ಲವೇ!?
(Thanks to strict lockdown guidelines coronavirus havoc reducing in bengaluru icu beds are available)