ಕೊರೊನಾ 3ನೇ ಅಲೆಯ ಆತಂಕ, ಮತ್ತೆ ಲಾಕ್ಡೌನ್ಗೆ ಒಲವು: ಹೀಗಿರಲಿದೆ ಜೂನ್ ತಿಂಗಳ ಚಿತ್ರಣ
Coronavirus Third Wave: ಕೊರೊನಾ ಎರಡನೆಯ ಅಲೆ ಸರಣಿಯನ್ನು ಮುರಿಯಲಾಗಿದೆ. ಈ ಸಾಫಲ್ಯದ ಸಮ್ಮುಖದಲ್ಲಿ ಮೂರನೆಯ ಅಲೆಯನ್ನು ಎದುರಿಸಲು ಜೂನ್ ಮಧ್ಯದವರೆಗೂ ಲಾಕ್ಡೌನ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ಸರ್ಕಾರವೂ ಈಗಾಗಲೇ ಜೂನ್ ತಿಂಗಳ ಪೂರ್ತಿ ಲಾಕ್ಡೌನ್ ನಿಯಮ ಮುಂದುವರಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು: ಕೊರೊನಾ ಸೋಂಕಿನ ಎರಡನೆಯ ಅಲೆ ಹೆಚ್ಚಾಗಿ ಪ್ರಾಣಾಪಾಯಗಳು ತೀವ್ರವಾದಾಗ ತಿಂಗಳ ಹಿಂದೆ ಜಾರಿಗೆ ತಂದ ಲಾಕ್ಡೌನ್ ನಿಯಮಗಳು ಜೂನ್ 7 ರವರೆಗೂ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿವೆ. ಲಾಕ್ಡೌನ್ ಕಠಿಣ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೊರೊನಾ ಸೋಂಕಿನ ಎರಡನೆಯ ಅಲೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಲಾಗಿದೆ. ಆದರೆ ಈ ಮಧ್ಯೆ, 3ನೇ ಅಲೆಯ ಆತಂಕ ಶುರುವಾಗಿದ್ದು, ಮತ್ತೆ ಲಾಕ್ಡೌನ್ಗೆ ಒಲವು ವ್ಯಕ್ತವಾಗಿದೆ. ಹಾಗಾಗಿ ಜೂನ್ 7 ರ ನಂತರವೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆಯಿದೆ.
ಕೊರೊನಾ ಎರಡನೆಯ ಅಲೆ ವೇಳೆ ಜಾರಿಗೆ ತಂದ ಲಾಕ್ಡೌನ್ ನಿಯಮ ಯಶಸ್ವಿಯಾಗಿದ್ದು, ಕೊರೊನಾ ಸರಣಿಯನ್ನು ಮುರಿಯಲಾಗಿದೆ. ಈ ಸಾಫಲ್ಯದ ಸಮ್ಮುಖದಲ್ಲಿ ಮೂರನೆಯ ಅಲೆಯನ್ನು ಎದುರಿಸಲು ಜೂನ್ ಮಧ್ಯದವರೆಗೂ ಲಾಕ್ಡೌನ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ಸರ್ಕಾರವೂ ಈಗಾಗಲೇ ಜೂನ್ ತಿಂಗಳ ಪೂರ್ತಿ ಲಾಕ್ಡೌನ್ ನಿಯಮ ಮುಂದುವರಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಈ ಮಧ್ಯೆ ಹೆಚ್ಚು ಕೊರೊನಾ ಪ್ರಕೋಪಕ್ಕೆ ಒಳಗಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಬಿಬಿಎಂಪಿ ಅಧಿಕಾರಿಗಳು ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಮತ್ತಷ್ಟು ದಿನದ ಕಾಲಾವಕಾಶ ಕೇಳಿದ್ದಾರೆ. ಈಗಾಗಲೇ ಲಾಕ್ಡೌನ್ ಇದ್ದು ಜನರ ಸ್ಪಂದನೆ ಉತ್ತಮವಾಗಿದೆ. ಸಾಧ್ಯವಾದಷ್ಟೂ ಲಾಕ್ಡೌನ್ ಈಗಲೇ ಮಾಡೋದು ಉತ್ತಮ ಎಂದು ತಜ್ಞರು ಸಹ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ಡೌನ್ ಓಪನ್ ಮಾಡಿ ಮತ್ತೆ ಸೋಂಕು ಹೆಚ್ಚಾದರೆ ಭಾರೀ ತೊಂದರೆ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಲಾಕ್ಡೌನ್ ವಿಸ್ತರಿಸಿ ಲಸಿಕೆ ಪ್ರಮಾಣ ಹೆಚ್ಚಿಸಿ, ಕನಿಷ್ಠ ಶೇ. 60 ರಷ್ಟು ಜನರಿಗೆ ಲಸಿಕೆ ತಲುಪಿಸುವುದು ಒಳಿತು ಎಂದಿದ್ದಾರೆ ತಜ್ಞರು.
ಮತ್ತೊಂದು ಕಡೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದ್ದರೂ ಮೂರನೇ ಅಲೆಯ ಆತಂಕ ಇದೆ. ಸೋಂಕಿನ ಪ್ರಮಾಣ ಮತ್ತಷ್ಟು ತಗ್ಗಿಸಿ, ಲಸಿಕೆ ಹೆಚ್ಚಿಸಲು ಲಾಕ್ಡೌನ್ ಅನುಕೂಲ ಎಂದು ಈಗಿರುವ ಲಾಕ್ಡೌನ್ ರೂಲ್ಸ್ ಮುಂದುವರೆಸಲು ಬಿಬಿಎಂಪಿ ಸಲಹೆ ನೀಡಿದೆ. ಒಮ್ಮೆ ಅನ್ ಲಾಕ್ ಮಾಡಿ, ಮತ್ತೆ ಲಾಕ್ಡೌನ್ ಮಾಡೋದು ಅಸಾಧ್ಯ. ಹೀಗಾಗಿ ಜೂನ್ ಮಧ್ಯದವರೆಗೆ ಲಾಕ್ಡೌನ್ ವಿಸ್ತರಣೆಗೆ ಬಿಬಿಎಂಪಿ ಒಲವು ತೋರಿದೆ.
ಒಂದೊಮ್ಮೆ ಲಾಕ್ಡೌನ್ ಮುಂದುವರೆಯದಿದ್ದರೆ ಷರತ್ತು ವಿಧಿಸಲು ಬಿಬಿಎಂಪಿ ಸಲಹೆ ನೀಡಿದೆ. ಅನ್ ಲಾಕ್ ಆದ್ಮೇಲೆಯೂ ಕಟ್ಟುನಿಟ್ಟಿನ ಷರತ್ತು ವಿಧಿಸಲು ಸಲಹೆ ನೀಡಿದೆ. ಸೋಂಕಿತರು ಹೆಚ್ಚು ಹೆಚ್ಚು ಪತ್ತೆಯಾದರೂ ಚಿಕಿತ್ಸೆ ನೀಡಲು ಟ್ರಯಾಜ್ ಸೆಂಟರ್, ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಆಗಿದೆ. ಹೋಮ್ ಐಸೋಲೇಶನ್ ಪದ್ಧತಿ ರದ್ದುಪಡಿಸಿ, ಟ್ರಯಾಜ್ ಸೆಂಟರ್ ಗೆ ಶಿಫ್ಟ್ ಮಾಡಿಸಬೇಕು. ಈಗಾಗಲೇ ತೀವ್ರ ಸೋಂಕಿನ ಲಕ್ಷಣ ಇದ್ದವರಿಗಷ್ಟೇ ಕೊರೊನಾ ಟೆಸ್ಟ್ ಮಾಡ್ತಿರೋ ಕಾರಣ ಅನ್ ಲಾಕ್ ಮಾಡಿದ್ಮೇಲೆಯೂ ಸೋಂಕಿನ ಲಕ್ಷಣಗಳಿರುವ ಜನರಿಗಷ್ಟೇ ಟೆಸ್ಟ್ ಮಾಡಲಾಗುವುದು ಎಂದು ಬಿಬಿಎಂಪಿ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಇನ್ನು, ಲಾಕ್ಡೌನ್ ತೆರವಿನ ನಂತರವೂ ಕೆಲ ಕ್ಷೇತ್ರಗಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು ಅನಿವಾರ್ಯ. ಥಿಯೇಟರ್ ಓಪನ್ ಮಾಡಿದಿರಲು ಬಿಬಿಎಂಪಿ ನಿರ್ಧಾರ ಮಾಡಿದೆ. ಶೇ.50, ಶೇ 75 ಎಂಬ ಯಾವ ವಿನಾಯಿತಿಯೂ ನೀಡದೆ ಕಂಪ್ಲೀಟ್ ಬಂದ್ ಇರುತ್ತೆ. ಮಾಲ್ ಗಳು ಸಹ ಯಥಾಸ್ಥಿತಿ ಬಂದ್ ಆಗಿರಲಿವೆ. ಜೂನ್ 7 ರ ನಂತರವೂ ಮಾಲ್ ಗಳು ಕ್ಲೋಸ್ ಇರಲಿವೆ. ಜಿಮ್, ಪಾರ್ಕ್, ಸ್ವಿಮ್ಮಿಂಗ್ ಫುಲ್ ಸಹ ಕ್ಲೋಸ್. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸೆಲ್ ಗೆ ಅವಕಾಶ ಮುಂದುವರಿಸಲಾಗುವುದು. ಬಾರ್, ಪಬ್ ಗಳು ಕ್ಲೋಸ್ ಕ್ಲೋಸ್. ಬಾರ್ ನಲ್ಲಿ ಕೇವಲ ಪಾರ್ಸೆಲ್ ಗೆ ವ್ಯವಸ್ಥೆ ಮುಂದುವರಿಯಲಿದೆ. ಸಧ್ಯಕ್ಕೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ ಗಂಟೆಯವರೆಗೂ ಖರೀದಿಗೆ ಅವಕಾಶವಿದೆ.
ಇನ್ನು ಸಾರ್ವಜನಿಕ ಆಟೋ, ಓಲಾ, ಉಬರ್, ಬಿಎಂಟಿಸಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.ಕೋವಿಡ್ ರೂಲ್ಸ್ ಫಾಲೋ ಮಾಡುವ ಮೂಲಕ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ.ಶೇ 50 ರಷ್ಟು ಮಾತ್ರ ಪ್ರಯಾಣಿಕರು ಸಂಚಾರ ಮಾಡಲು ಅವಕಾಶ ನೀಡಬಹುದು. ಮದುವೆ 40, ಅಂತ್ಯಸಂಸ್ಕಾರದಲ್ಲಿ 10 ಜನ ಜನರಿಗೆ ಮಾತ್ರ ಅವಕಾಶ ಕಲ್ಪಿಸಬಹುದು. ಸಭೆ, ಸಮಾರಂಭ, ಪ್ರತಿಭಟನೆಗಳು ನಿರ್ಬಂಧಕ್ಕೊಳಪಡಲಿವೆ.
ಆದರೆ ಬೃಹತ್ ಮಾರ್ಕೆಟ್ ಬಂದ್ ಮುಂದುವರಿಯಲಿವೆ. ಕೆ.ಆರ್. ಮಾರ್ಕೆಟ್, ರಸೆಲ್ ಮಾರ್ಕೆಟ್ ನಂತಹ ಮಾರ್ಕೆಟ್ ಗಳು ಸಹ ಕ್ಲೋಸ್ ಇರಲಿವೆ. ತರಕಾರಿ, ಹೂ ಹಣ್ಣು ಅಗತ್ಯ ವಸ್ತುಗಳ ಖರೀದಿಗೆ ಯಥಾಸ್ಥಿತಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಅವಕಾಶ ಮುಂದುವರಿಯಲಿದೆ ಎಂದು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿರುವ ಬಿಬಿಎಂಪಿ ಉನ್ನತಾಧಿಕಾರಿಗಳು ತರ್ಕಿಸಿದ್ದಾರೆ.
(coronavirus third wave fear engulfs karnataka officials lockdown may continue in june month)