ಅವ್ರು ಸರ್ಕಾರಿ ರತಿ ಕಾಮಣ್ಣ ಅಂತಲೇ ಫೇಮಸ್. ಅಂದ್ರೆ ಅವ್ರ ಪವಾಡವೇ ಅದ್ಭುತ. ಹೌದು ಯುವತಿಯರಿಗೆ ಕಂಕಣ ಭಾಗ್ಯ, ಮಹಿಳೆಯರಿಗೆ ಸಂತಾನಭಾಗ್ಯ, ಬೇಡಿದವರಿಗೆ ಬಯಸಿದ ಭಾಗ್ಯ ದಯಪಾಲಿಸುತ್ತಾರೆ (blessings). ಹಾಗಂತ ಇದೇನಪ್ಪ ಸರ್ಕಾರ ಹೊಸ ಭಾಗ್ಯಗಳೇನಾದ್ರೂ ಘೋಷಿಸಿದ್ಯಾ ಅಂದ್ಕೋಬೇಡಿ. ಇದು ಸರ್ಕಾರಿ ಭಾಗ್ಯವಲ್ಲ. ನಂಬಿದ ಭಕ್ತರಿಗೆ ರತಿ, ಕಾಮಣ್ಣ ನೀಡೋ ಭಾಗ್ಯಗಳು. ಆದರೆ ಬಿಟ್ಟಿ ಅಲ್ಲ, ಉಚಿತ ಅಲ್ಲ, ಸುಖಾಸುಮ್ಮನೆ ಈಡೇರಲ್ಲ! ಕೆಜಿ ಗಟ್ಟಲೇ ಬಂಗಾರ ಹಾಕಿ ಹರಕೆ ಈಡೇರಿಸಿಕೊಳ್ತಾರೆ. ಒಂದು ಗಂಡು ಅಂತ ಹರಕೆ ಹೊತ್ತ ಮಹಿಳೆಗೆ ಅವಳಿ ಗಂಡು ಮಕ್ಕಳ ಕರುಣಿಸಿದ್ದಾನೆ ಅಂತ ಭಕ್ತರು ಸಂಸತ ಹಂಚಿಕೊಂಡಿದ್ದಾರೆ. ಆ ರತಿ ಕಾಮಣ್ಣರ (rati kamanna) ಸಂಭ್ರಮ ಕ್ಷಣ ನೀವೂ ಕಣ್ಮುಂಬಿಕೊಳ್ಳಿ.
ಚಿನ್ನಾಭರಣಗಳಿಂದ ಶೃಂಗಾರಗೊಂಡ ರತಿ, ಕಾಮಣ್ಣ! ಇಷ್ಟಾರ್ಥ ಈಡೇರಿಸಿಕೊಳ್ಳಲು ಸಾಲು ಸಾಲಾಗಿ ನಿಂತ ದಂಪತಿಗಳು! ಕೆಜಿಗಟ್ಟಲೇ ಚಿನ್ನಾಭರಣ ಹಾಕಿ ಹರಕೆ ಹೊತ್ತುವ ಭಕ್ತರು! ಹರಕೆ ಈಡೇರಿದ ಭಕ್ತರಿಂದ ಕಾಮಣ್ಣನಿಗೆ ಚಿನ್ನ ದಾನ! ವಿವಿಧ ಚಿನ್ನಾಭರಣಗಳಿಂದ ರತಿ ಕಾಮಣ್ಣನಿಗೆ ಅಲಂಕಾರ. ಸರತಿ ಸಾಲಿನಲ್ಲಿ ನಿಂತು ಚಿನ್ನ ನೀಡುವ ಭಕ್ತರು. 25 ಕೆಜಿ ಚಿನ್ನಾಭರಣಗಳಿಂದ ಶೃಂಗಾರಗೊಂಡ ರತಿ ಕಾಮಣ್ಣ! ಅಂದ್ಹಾಗೆ ಈ ಬಂಗಾರದ ಕಾಮಣ್ಣ ಇರೋದು ಗದಗ ನಗರದಲ್ಲಿ (gadag).
ಸಾಮಾನ್ಯವಾಗಿ ನಾವು ಹೋಳಿಹಬ್ಬ ಅಂದ್ರೆ ರತಿ, ಕಾಮಣ್ಣರನ್ನು ನೋಡಿರ್ತಿವಿ. ಆದ್ರೆ ಬ್ರಿಟಿಷ್ ಕಾಮಣ್ಣ, ಸರ್ಕಾರಿ ಕಾಮಣ್ಣ ಅಂತಲೇ ಖ್ಯಾತಿ ಪಡೆದ ನೂರಾರು ವರ್ಷ ಇತಿಹಾಸದ ರತಿ-ಕಾಮಣ್ಣರ ನೋಡೋದೆ ವಿಶೇಷ. ಇವ್ರು ಅಂತಿಂಥವರಲ್ಲ. ಸಾಕ್ಷಾತ್ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವವರು.
ಹೌದು ಇಲ್ಲಿ ಮನೆಯಲ್ಲಿನ ಚಿನ್ನಾಭರಣ ಹಾಕಿ ಹರಕೆ ಹೊತ್ರೆ ಸಾಕು ವರ್ಷದೊಳಗೆ ಇಷ್ಟಾರ್ಥ ಸಿದ್ಧಿಯಾಗೋದು ಗ್ಯಾರಂಟಿ. ಗದಗ ನಗರದ ಕಿಲ್ಲಾ ಓಣಿಯ ರತಿ, ಕಾಮಣ್ಣ ಜೋಡಿಯ ವಿಶೇಷ ಇದು. ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ರತಿ-ಕಾಮಣ್ಣರ ಹಬ್ಬ ಸಡಗರದಿಂದ ಆಚರಿಸ್ತಾರೆ. ಹೋಳಿ ಹುಣ್ಣಿಮೆ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕಾಮ-ರತಿಯರ ಶೃಂಗಾರ ನೋಡೋದೆ ಕಣ್ಣಿಗೆ ಹಬ್ಬ.
ಇದು ರಾಜ್ಯದಲ್ಲೇ ಪ್ರಸಿದ್ದಿ ಹೊಂದಿದೆ. ಸುಮಾರು159 ವರ್ಷಗಳಿಂದ ಇಲ್ಲಿ ಕಾಮ-ರತಿಯರ ಉತ್ಸವ ಮೂರ್ತಿಗಳನ್ನು ಹೋಳಿ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಲಾಗುತ್ತದೆ. ರಂಗಪಂಚಮಿ ಹಿಂದಿನ ದಿನ ಕಾಮ-ರತಿಯರಲ್ಲಿ ಭಕ್ತಿಯಿಂದ ನಡೆದುಕೊಳ್ಳುವ ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ.
ಮದುವೆ ವಿಳಂಬವಾದ ಯುವತಿಯರು ಕಾಮನ ಕೈಗೆ ಅರಿಷಿಣದ ತುಂಡಿನಿಂದ ಕಂಕಣಕಟ್ಟಿ ಕಂಕಣ ಭಾಗ್ಯ ಕರುಣಿಸೆಂದು ಬೇಡಿಕೊಂಡರೆ… ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ರತಿಗೆ ಉಡಿ ತುಂಬಿ ಚಿನ್ನಾಭರಣಗಳಿಂದ ಶೃಂಗರಿಸಿ ಬೇಡಿಕೊಳ್ಳುತ್ತಾರೆ. ಗಂಡು ಮಕ್ಕಳಿಲ್ಲ ಅಂತ ಹರಕೆ ಹೊತ್ತ ದಂಪತಿಗೆ ಅವಳಿ ಗಂಡು ಮಕ್ಕಳನ್ನೇ ನೀಡಿದ್ದಾನೆ ಅಂತ ಅವಳಿ ಮಕ್ಕಳ ಪಡೆದ ದಂಪತಿ ಹೇಳುತ್ತಾರೆ.
ಭಕ್ತರು ಯಾವುದೇ ಭಯವಿಲ್ಲದ ರಂಗ ಪಂಚಮಿಯ ಹಿಂದಿನ ದಿನ ಮನೆಯಲ್ಲಿದ್ದ ಚಿನ್ನಾಭರಣ ರತಿ ಕಾಮಣ್ಣನ ಮೈಮೇಲೆ ಅಂದಾಜು 25 ಕೆ.ಜಿ.ಯಷ್ಟು ಬಂಗಾರದ ಆಭರಣಗಳನ್ನು ಹಾಕಿ ಶೃಂಗರಿಸಲಾಗುತ್ತದೆ. ಕಾಮನ ಮೈಮೇಲೆಯೂ ಪುರುಷರು ಧರಿಸುವ ಕೆಲವು ಆಭರಣಗಳನ್ನು ಹಾಕಿ ಶೃಂಗಾರ ಮಾಡಲಾಗುತ್ತದೆ. ಈ ಬಂಗಾರದ ಆಭರಣಗಳನ್ನು ಭಕ್ತರು ಸ್ವಯಂಪ್ರೇರಣೆಯಿಂದಲೇ ತಂದು ಕೊಡುತ್ತಾರೆ. ಆಭರಣಗಳ ಮೇಲೆ ಅವರ ಹೆಸರಿನ ಚೀಟಿ ಬರೆದು ರತಿಯ ಮೈಮೇಲೆ ಹಾಕಲಾಗುತ್ತದೆ. ರಂಗ ಪಂಚಮಿಯ ದಿನ ರಾತ್ರಿ ಉತ್ಸವ ಮೂರ್ತಿಗಳ ಮೆರವಣಿಗೆ ಮುಗಿದ ಮೇಲೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.
ಈ ಪ್ರದೇಶದಲ್ಲಿ ಈ ಹಿಂದೆ ಸರಕಾರಿ ಕಚೇರಿಗಳು ಇದ್ದುದರಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ನೌಕರರು ಕೂಡ ಈ ಉತ್ಸವದಲ್ಲಿ ಭಕ್ತಿ, ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಕಾರಣದಿಂದ ಇದು ಸರ್ಕಾರಿ ಕಾಮಣ್ಣ ಅಂತಲೇ ಫೇಮಸ್ ಆಗಿದೆ. ಕಾಮ-ರತಿಯರ ಸಂಭ್ರಮ ನೋಡಲು ಗದಗ ನಗರ ಮಾತ್ರವಲ್ಲ ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ನೋಡಲು ಜನ್ರು ಆಗಮಿಸಿ ಕಾಮ, ರತಿಯರ ಸಂಭ್ರಮ ನೋಡಿ ಖುಷಿ ಪಡ್ತಾರೆ.
ಗದಗ ನಗರಕ್ಕೆ ಇನ್ನೂ ರೈಲ್ವೆ ಮಾರ್ಗ ನಿರ್ಮಾಣ ವಾಗದಿದ್ದ ಕಾಲದಲ್ಲೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದರಿಂದ ಈ ಉತ್ಸವ ಮೂರ್ತಿಗಳನ್ನು ಮಾಡಿಸಿಕೊಂಡು ತರಲಾಗಿದೆ. ಅಂದಿನಿಂದ ಇಂದಿನವರೆಗೂ ಈ ಮೂರ್ತಿಗಳನ್ನು ಬದಲಾವಣೆ ಮಾಡಿಲ್ಲ.159 ವರ್ಷಗಳ ಇತಿಹಾಸ ಹೊಂದಿರೋ ಮೂರ್ತಿಗಳು ಇಂದಿಗೂ ನಳನಳಿಸುತ್ತಿರೋದು ಮಾತ್ರ ವಿಶೇಷ.
Published On - 1:08 pm, Fri, 29 March 24